ಇಲಿ ಪಾಷಾಣಗಳ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ?. ಕೀಟನಾಶಗಳನ್ನು ಹೊರತುಪಡಿಸಿದರೆ, ಅತೀ ಸಾಮಾನ್ಯವಾಗಿ ಉಪಯೋಗಿಸುವ ವಿಷವಸ್ತುಗಳಲ್ಲಿ ಇಲಿ ಪಾಷಾಣಗಳು ಸಹ ಸೇರಿವೆ. ಇಲಿ ನಾಷಕಗಳು ಇಷ್ಟು ಜನಪ್ರಿಯವಾಗಲಿಕ್ಕೆ ಅದರದೇ ಕಾರಣಗಳಿವೆ. ಏಕೆಂದರೆ, ಇಲಿಗಳು, ಹೆಗ್ಗಣಗಳು, ಮೂಗಿಲಿಗಳು ಮತ್ತು ಚಿಕ್ಕಿಲಿಗಳು ಇವುಗಳನ್ನು ದಂಷ್ಟ್ರಕಗಳೆಂದು ಕರೆಯುತ್ತಾರೆ. ಏಕೆಂದರೆ ಇವುಗಳಿಗೆ ಹರಿತವಾದ ಹಲ್ಲುಗಳು ಇರುತ್ತಿದ್ದು ಯಾವುದಾದರೂ ವಸ್ತುಗಳನ್ನು ಇವು ಕಡಿಯುತ್ತಲೇ ಇರುತ್ತಿರುತ್ತವೆ. ಈ ಹಲ್ಲುಗಳನ್ನು ಉಪಯೋಗಿಸಿ ಇವು ಸುಮಾರು 10-15 ಮೀಟರ್ ಉದ್ದದ ಸುರಂಗವನ್ನು ಕೊರೆಯುತ್ತಾ ಹೋಗುತ್ತವೆ. ಇವು ಮನುಷ್ಯನ ಅಹಾರಕ್ಕೆ ಮುಖ್ಯವಾದ ಶತ್ರುಗಳು. ಕೇವಲ ಅಹಾರ ಪದಾರ್ಥಗಳನ್ನು ತಿಂದರೆ ತೊಂದರೆಯಿರುವುದಿಲ್ಲವಾಗಿತ್ತು. ಆದರೆ ಇವು ತಿನ್ನುವುದಕ್ಕಿಂತ ಹಾಳು ಮಾಡುವುದು ಜಾಸ್ತಿ. ಅಲ್ಲದೇ ಮೂಷಿಕಗಳ ಮೂತ್ರದಿಂದ ಲೆಪೆÇ್ಟೀಸ್ಪೈರಾ (ಇಲಿ ಜ್ವರ) ಮತ್ತು ಇತರ ಕಾಯಿಲೆಗಳು ಹರಡುವುದರಿಂದ ಇವುಗಳನ್ನು ನಾಶಮಾಡುವುದು ಮಾನವನ ಆರೋಗ್ಯದ ದೃಷ್ಟಿಯಿಂದಲೂ ಸಹ ಅವಶ್ಯಕವಾಗಿದೆ.
ಇಲಿ ಪಾಷಾಣಗಳನ್ನು ದಂಷ್ಟ್ರಕಗಳನ್ನು ನಾಶ ಮಾಡಲು ಉಪಯೋಗಿಸುತ್ತಾರೆ. ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳು ಪಾಷಾಣವನ್ನು ಹಾಕಲು ಉಪಯೋಗಿಸುವ ವಸ್ತುಗಳನ್ನು ಸೇವಿಸುವುದರಿಂದ ಅಥವಾ ಮಾಂಸಾಹಾರಿ ಪ್ರಾಣಿಗಳಾದ ಬೆಕ್ಕು ಮತ್ತು ನಾಯಿಗಳು ಪಾಷಾಣ ಪೀಡಿತ ಇಲಿಗಳನ್ನು ತಿನ್ನುವುದರಿಂದ ವಿಷಬಾಧೆಗೆ ಒಳಗಾಗುತ್ತವೆ. ಬಹಳಷ್ಟು ಬಾರಿ ಇಲಿ ಪಾಷಾಣಗಳನ್ನು ದುರುದ್ದೇಶ ಪೂರ್ವಕವಾಗಿ ಪ್ರಾಣಿಗಳಿಗೆ ನೀಡುವುದರಿಂದ ಅವು ವಿಷಬಾಧೆಗೆ ಒಳಗಾಗುತ್ತವೆ. ಇಲಿ ಪಾಷಾಣಗಳನ್ನು ಎರಡು ಮುಖ್ಯವಾದ ವಿಧಾನದಲ್ಲಿ ವಿಂಗಡಿಸುತ್ತಾರೆ. ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಇಲಿ ಪಾಷಾಣಗಳು ಮತ್ತು ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯದ ಇಲಿ ಪಾಷಾಣಗಳು ಎಂಬುದು ಈ ವಿಂಗಡಣೆ. ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಇಲಿ ಪಾಷಾಣಗಳಿಗೆ ಉದಾಹರಣೆಗಳೆಂದರೆ ಬ್ರೋಮೋಡಯಲೋನ್ (ಮಾರ್ಟಿನ್ ರ್ಯಾಟ್ ಕಿಲ್), ವಾರ್ಫಾರಿನ್ ಮತ್ತು ಪಿಂಡೋನ್ ಇತ್ಯಾದಿಗಳು. ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯದೇ ಇಲಿಗಳನ್ನು ನಾಶಪಡಿಸುವ ಇಲಿ ಪಾಷಾಣಗಳಿಗೆ ಉತ್ತಮ ಉದಾಹರಣೆಯಂದರೆ ಝಿಂಕ್ ಫಾಸ್ಫೈಡ್. ಇಲ್ಲಿ ನಾವು ಅತೀ ಸಾಮಾನ್ಯವಾಗಿ ವಿಷಬಾಧೆಯನುಂಟು ಮಾಡುವ ಬ್ರೋಮೋಡಯಲೋನ್ (ಮಾರ್ಟಿನ್ ರ್ಯಾಟ್ ಕಿಲ್) ಮತ್ತು ಝಿಂಕ್ ಫಾಸ್ಫೈಡ್ ಬಗ್ಗೆ ಚರ್ಚಿಸುವುದು ಸೂಕ್ತ


ಬ್ರೋಮೋಡಯಲೋನ್:
ಬ್ರೋಮೋಡಯಲೋನ್ (ಮಾರ್ಟಿನ್ ರ್ಯಾಟ್ ಕಿಲ್) ಈ ಇಲಿ ಪಾಷಾಣ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಇಲಿ ಪಾಷಾಣಗಳಲ್ಲಿ ಬಹಳ ಸಾಮಾನ್ಯವಾಗಿ ದೊರೆಯುವ ವಿಷ. ಇದು ವಿಟಾಮಿನ್ ಕೆ ಅಂಶವನ್ನು ನಿಷ್ಕ್ರಿಯಗೊಳಿಸುವುದರಿಂದ ರಕ್ತ ಹೆಪ್ಪುಗಟ್ಟಿಸಲು ಅವಶ್ಯವಿರುವ ಅಂಶಗಳು ಕಡಿಮೆಯಾಗಿ ಪೆÇ್ರೀಥ್ರೋಂಬಿನ್ ಅಂಶ ಥ್ರೋಂಬಿನ್ ಆಗಿ ಪರಿವರ್ತನೆಗೊಳ್ಳುವುದಿಲ್ಲ. ಇದರಿಂದ ¥sóÉೈಬಿನೋಜಿನ್ ಇದು ¥sóÉೈಬ್ರಿನ್ ಆಗಿ ಪರಿವರ್ತನೆಗೊಳ್ಳುವುದಿಲ್ಲ. ¥sóÉೈಬ್ರಿನ್ ಇದು ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುವುದರಿಂದ ರಕ್ತ ಹೆಪ್ಪುಗಟ್ಟದೇ ದೇಹದ ತುಂಬಾ ರಕ್ತ ಸ್ರಾವವಾಗುತ್ತದೆ. ಮಾರ್ಟಿನ್ ರ್ಯಾಟ್ ಕಿಲ್ ಇತ್ಯಾದಿ ಇಲಿ ಪಾಷಾಣಗಳನ್ನು ಒಂದೇ ಸಲ ಹಾಕಿದರೆ ಸಾಕು. ಇಲಿಗಳು ಸಾಯುತ್ತವೆ. ಆದರೆ ಇತರ ಇಲಿ ನಾಶಕಗಳನ್ನು ಇಲಿಗಳಿಗೆ 5-6 ಸಲ ಹಾಕಬೇಕಾಗುತ್ತದೆ. ಈ ಗುಂಪಿಗೆ ಸೇರಿದ ಇಲಿ ಪಾಷಾಣಗಳು ಪಕ್ಷಿಗಳನ್ನು ಸೇರಿ ಎಲ್ಲಾ ಪ್ರಾಣಿಗಳನ್ನು ಭಾಧಿಸುತ್ತವೆ. ಈ ಇಲಿ ಪಾಷಾಣಗಳು ಸಣ್ಣ ಪ್ರಾಣಿಗಳಲ್ಲಿ ವಿಷಬಾಧೆಯನ್ನು ಬಹಳ ಸಾಮಾನ್ಯವಾಗಿ ಮಾಡುತ್ತವೆ. ದೇಹದಲ್ಲಿನ ರಕ್ತವನ್ನು ಹೆಪ್ಪುಘಟ್ಟಿಸಲು ಅವಶ್ಯವಿರುವ ಎಲ್ಲಾ ಅಂಶಗಳು ಮುಗಿದ ನಂತರ ವಿಷಬಾಧೆಯ ಲಕ್ಷಣಗಳು ಕಂಡು ಬರುತ್ತವೆ. ಇದರಿಂದ ಪ್ರಾಣಿಯು ವಿಷ ಬಾಧೆಯಿಂದ ಬಹಳ ದಿನ ಬಳಲುತ್ತದೆ. ಅಲ್ಲದೇ ದೇಹದಿಂದ ಈ ಪಾಷಾಣಗಳು ವಿಸರ್ಜನೆಗೊಳ್ಳಲು ಸಮಯ ಬೇಕಾಗುತ್ತದೆ. ಅದುದರಿಂದಲೂ ಸಹ ಜಾನುವಾರುಗಳು ಬಹಳ ದಿನ ವಿಷಬಾಧೆಯಿಂದ ಬಳಲುತ್ತವೆ.
ವಿಷಬಾಧೆಯ ಲಕ್ಷಣಗಳು:
ವಿಷಬಾಧೆಯ ಲಕ್ಷಣಗಳು ಕಾಣಿಸಿಕೊಳ್ಳಲು ಕನೀಷ್ಟ 1-3 ದಿನಗಳು ಬೇಕು. ತೀವೃವಾದ ಆಂತರಿಕ ರಕ್ತಸ್ರಾವವು ಇದ್ದರೂ ಸಹ ಇದನ್ನು ಗುರುತಿಸಲು ಬೇಗ ಸಾಧ್ಯವಿಲ್ಲ. ಆದರೆ ರಕ್ತ ಸ್ರಾವವು ಮೂಗು, ಬಾಯಿ, ಕಣ್ಣು ಇತ್ಯಾದಿ ನೈಸರ್ಗಿಕ ದ್ವಾರಗಳಿಂದ ಪ್ರಾರಂಭವಾಗುತ್ತದೆ. ಕಣ್ಣಿನ ಲೋಳ್ಪದರಗಳು ಮತ್ತು ಇತರ ಅಂಗಾಂಶಗಳಲ್ಲಿ ತೀವ್ರವಾದ ರಕ್ತ ಸ್ರಾವ ಕಾಣಿಸಿಕೊಳ್ಳಬಹುದು. ಮೆದುಳಿನಲ್ಲಿ ರಕ್ತ ಸ್ರಾವ ಬಹಳ ಸಾಮಾನ್ಯ. ಕಾಲಿನ ಗಂಟುಗಳಲ್ಲಿಯೂ ಸಹ ರಕ್ತ ಸ್ರಾವವು ಕಾಣಿಸಿಕೊಳ್ಳಬಹುದು. ಇದರಿಂದ ಕಾಲು ಕುಂಟುವಿಕೆ ಪ್ರಾರಂಭವಾಗುತ್ತದೆ. ಆಂತರಿಕ ರಕ್ತ ಸ್ರಾವದಿಂದ ಆಗುವ ಅಘಾತದಿಂದ ಪ್ರಾಣಿಯು ಮರಣವನ್ನಪ್ಪುತ್ತದೆ.
ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಇಲಿ ಪಾಷಾಣಗಳ ವಿಷ ಬಾಧೆಯ ಚಿಕಿತ್ಸೆ ಮತ್ತು ಪ್ರಥಮೋಪಚಾರ
ಸಸ್ಯ ಮೂಲದ ವಿಟಾಮಿನ್ ಕೆ ಇದು ಈ ವಿಷ ಬಾಧೆಗೆ ತಕ್ಕ ಪ್ರತ್ಯೌಷಧ. ತಜ್ಞ ಪಶುವೈದ್ಯರು ಇದನ್ನು ಸೂಕ್ತ ಪ್ರಮಾಣದಲ್ಲಿ ನೀಡಿ ಜಾನುವಾರನ್ನು ಬದುಕಿಸಬಲ್ಲರು. ಕೆಲವು ಸಲ ರಕ್ತವರ್ಗಾವಣೆಯೂ ಸಹ ಅಗತ್ಯವಾದೀತು. ತಕ್ಷಣ ಚಿಕಿತ್ಸೆ ನೀಡಿದಲ್ಲಿ ಜೀವರಕ್ಷಣೆ ಸಾಧ್ಯ. ಪ್ರಥಮೋಪಚಾರವಾಗಿ ವಿಟಾಮಿನ್ ಕೆ ಒದಗಿಸುವ ವಿವಿಧ ಸಸ್ಯಗಳಾದ ಕಿರುನೆಲ್ಲಿ, ಬಾಳೆ ಹಣ್ಣು ಇತ್ಯಾದಿಗಳನ್ನು ನೀಡಬಹುದು.
ಝಿಂಕ್ ಫಾಸ್ಫೈಡ್ ಇಲಿ ಪಾಷಾಣ ವಿಷ ಬಾಧೆ:
ಝಿಂಕ್ ಫಾಸ್ಫೈಡ್ ಇದು ಅತಿ ಸುಲಭವಾಗಿ ಕಡಿಮೆ ಬೆಲೆಯಲ್ಲಿ ರಸ್ತೆಯ ಬದಿಗೇ ದೊರೆಯುವ ಕಪ್ಪು ಬಣ್ಣದ ಪುಡಿ. ಇದು ಅತೀ ಶೀಘ್ರವಾಗಿ ಕಾರ್ಯ ನಿರ್ವಹಿಸುವ ಇಲಿ ಪಾಷಾಣ. ತಿಂದ ಕೆಲವು ಘಂಟೆಯಲ್ಲೇ ಇದು ಮರಣವನ್ನುಂಟು ಮಾಡುತ್ತದೆ. ಜಠರದ ಆಮ್ಲ ವಾತಾವರಣದಲ್ಲಿ ಝಿಂಕ್ ಫಾಸ್ಫೈಡ್ ಇದು ಫಾಸ್ಫಿನ್ ಎಂಬ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ಜಠರದ ಲೋಳ್ಪದರ ಮತ್ತು ಕರುಳಿನ ಪದರಕ್ಕೆ ತೀವ್ರವಾದ ಕಿರಿಕಿರಿ ಉಂಟು ಮಾಡಿ ವಾಂತಿ ಮಾಡಬಲ್ಲ ಪ್ರಾಣಿಗಳಲ್ಲಿ ತೀವೃತರವಾದ ವಾಂತಿಯನ್ನು ಉಂಟು ಮಾಡುತ್ತದೆ. ಇದು ಒಂದು ತರದಲ್ಲಿ ಪ್ರಾಣಿಗಳಲ್ಲಿ ವಿಷ ಬಾಧೆಯನ್ನು ಕಡಿಮೆ ಮಾಡಿಕೊಳ್ಳುವ ವಿಧಾನವೂ ಹೌದು. ಏಕೆಂದರೆ ವಾಂತಿಯಾದಾಗ ಹೆಚ್ಚಿನ ವಿಷವಸ್ತು ದೇಹದಿಂದ ಹೊರ ಹಾಕಲ್ಪಡುತ್ತದೆ. ಇದರಿಂದ ರಕ್ತಕ್ಕೆ ಇವು ಸೇರುವ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ಮೆಲುಕಾಡಿಸುವ ಪ್ರಾಣಿಗಳು ಸ್ವಾಭಾವಿಕವಾಗಿ ವಾಂತಿ ಮಾಡಿಕೊಳ್ಳಲಾರವು. ಅದುದರಿಂದ ಅವುಗಳಲ್ಲಿ ವಿಷಬಾಧೆ ಜಾಸ್ತಿ. ಝಿಂಕ್ ಫಾಸ್ಫೈಡ್ ಇಲಿ ಪಾಷಾಣ ಬೆಳ್ಳುಳ್ಳಿಯ ಘಾಟನ್ನು ಹೊಂದಿರುವುದರಿಂದ ನಾಯಿ ಮತ್ತು ಬೆಕ್ಕಿನಂತ ವಾಸನೆಯನ್ನು ಜಾಸ್ತಿ ಗೃಹಿಸುವ ಪ್ರಾಣಿಗಳು ಇದನ್ನು ಅಷ್ಟು ಸುಲಭವಾಗಿ ತಿನ್ನುವುದಿಲ್ಲ. ಆದರೆ ಇವು ವಿಷ ತಿಂದ ಇಲಿ ಅಥವಾ ವಿಷ ಮಿಶ್ರಿತ ಅಹಾರವನ್ನು ತಿಂದು ವಿಷಬಾಧೆಗೆ ಒಳಗಾಗುವುದು ಜಾಸ್ತಿ. ಝಿಂಕ್ ಫಾಸ್ಫೈಡ್ ಮತ್ತು ಫಾಸ್ಫಿನ್ ಅನಿಲ ಎರಡೂ ಹೊಟ್ಟೆಗೆ ಕಿರಿಕಿರಿ ಉಂಟು ಮಾಡಿ ರಕ್ತ ಮಿಶ್ರಿತವಾದ ಬೇಧಿಯನ್ನು ಉಂಟು ಮಾಡುತ್ತವೆ. ಆದರೆ ನೆನಪಿಡಬೇಕಾದ ಅಂಶವೆಂದರೆ, ವಿಷಬಾಧೆಯು ಝಿಂಕ್ ಅಥವಾ ಸತು ಇಲ್ಲವೆ ರಂಜಕದಿಂದ ಆಗುವುದಿಲ್ಲ. ಬದಲಾಗಿ ಇದು ಫಾಸ್ಫಿನ್ ಎಂಬ ಅನಿಲದಿಂದ ಉಂಟಾಗುತ್ತದೆ.
ಶರೀರವನ್ನು ಸೇರಿದ ಫಾಸ್ಫಿನ್ ಅನಿಲವು ರಕ್ತನಾಳಗಳನ್ನು ಮತ್ತು ರಕ್ತಕಣಗಳನ್ನು ಹಾನಿಗೊಳಿಸಿ ಅಂಗಾಂಶಗಳಿಗೆ ಆಮ್ಲಜನಕ ದೊರಕದಂತೆ ಮಾಡುತ್ತದೆ. ಮರಣವು ಅಂಗಾಂಶಗಳಿಗೆ ಅಮ್ಲಜನಕದ ಪೂರೈಕೆಯಲ್ಲಿನ ವ್ಯತ್ಯಯದಿಂದ ಉಂತಾಗುವ ಉಸಿರಾಟದ ನಿಲ್ಲುವಿಕೆಯಿಂದ ಉಂಟಾಗುತ್ತದೆ.


ಝಿಂಕ್ ಫಾಸ್ಫೈಡ್ ಇಲಿ ಪಾಷಾಣದ ವಿಷ ಬಾಧೆಯ ಲಕ್ಷಣಗಳು:
ಈ ವಿಷಬಾಧೆಯ ಲಕ್ಷಣಗಳು ಶೀಘ್ರವಾಗಿ ಗೋಚರಿಸುತ್ತವೆ. ತೀವ್ರವಾದ ವಾಂತಿ ಮತ್ತು ರಕ್ತ ಬೇಧಿ ಎರಡೂ ಏಕಕಾಲಕ್ಕೆ ಕಾಣಿಸಿಕೊಳ್ಳಬಹುದು. ನಂತರ ಹೊಟ್ಟೆ ನೋವು ಕಾಣಿಸಿಕೊಂಡು ಅದು ಜಾಸ್ತಿಯಾಗುತ್ತಾ ಹೋಗುತ್ತದೆ. ಒದ್ದಾಡುವಿಕೆ ಮತ್ತು ಹೊಟ್ಟೆ ನೋವು ಜಾನುವಾರುಗಳಲ್ಲಿ ಪ್ರಮುಖವಾದ ಲಕ್ಷಣಗಳು. ಹೊಟ್ಟೆ ಉಬ್ಬರ ಸಹ ಕಾಣಿಸಿಕೊಳ್ಳಬಹುದು. ನಾಯಿಗಳು ಹೊಟ್ಟೆ ನೋವನ್ನು ತಡೆದುಕೊಳ್ಳಲಾರದೆ ದಿಕ್ಕು ದೆಸೆಯಿಲ್ಲದೇ ಓಡುತ್ತಿರುತ್ತವೆ. ಕಾರಣವಿಲ್ಲದೇ ಬೊಗಳುವಿಕೆ ಮತ್ತೊಂದು ಪ್ರಮುಖವಾದ ಲಕ್ಷಣ. ಮರಣವು 3-48 ಘಂಟೆ ಅವಧಿಯಲ್ಲಿ ಸಂಭವಿಸಬಹುದು.
ಮರಣೋತ್ತರ ಪರೀಕ್ಷೆ: ಮರಣೋತ್ತರ ಪರೀಕ್ಷೆಯಲ್ಲಿ ಹೊಟ್ಟೆಯ ಉರಿಯೂತ, ಕಪ್ಪು ಬಣ್ಣದ ಮಲ, ಮತ್ತು ರಕ್ತಸ್ರಾವವನ್ನು ಗಮನಿಸಬಹುದು.
ಚಿಕಿತ್ಸೆ: ಈ ವಿಷಬಾಧೆಗೆ ಸೂಕ್ತವಾದ ಪ್ರತ್ಯೌಷಧವಿಲ್ಲ. ಆದರೆ ಜಠರದ ಆಮ್ಲತೆಯನ್ನು ಕಡಿಮೆ ಮಾಡಿದರೆ ಫಾಸ್ಫಿನ್ ಅನಿಲದ ಉತ್ಪಾದನೆ ಕಡಿಮೆಯಾಗಿ ವಿಷಬಾಧೆಯ ತೀವ್ರತೆ ಕಡಿಮೆಯಾಗುತ್ತದೆ. ಕಾರಣ ರೈತರು ತಜ್ಞ ಪಶುವೈದ್ಯರಿಂದ ಚಿಕಿತ್ಸೆ ದೊರಕುವವರೆಗೂ ವಿಷ ಬಾಧೆಗೆ ಒಳಗಾದ ಜಾನುವಾರಿಗೆ ಅಡಿಗೆ ಸೋಡಾದ ತಿಳಿ ದ್ರಾವಣವನ್ನು 1-2 ಲೀಟರ್‍ನಷ್ಟು ಕುಡಿಸಬಹುದು. ಆದರೆ ತೀವ್ರತರವಾದ ವಿಷಬಾಧೆಗೆ ಒಳಗಾದ ಪ್ರಾಣಿಯನ್ನು ಉಳಿಸಿಕೊಳ್ಳುವುದು ಕಷ್ಟದ ಕೆಲಸ.
ಈ ಇಲಿ ಪಾಷಾಣಗಳನ್ನು ಹೊರತು ಪಡಿಸಿದರೆ ಇನ್ನೂ ಅನೇಕ ಇಲಿ ಪಾಷಾಣಗಳಾದ ಸ್ಟ್ರಿಕ್ನಿನ್, ಅಲ್ಫಾ ನ್ಯಾಪ್ಥೈಲ್ ಥಯೋ ಯೂರಿಯಾ (ಅಂಟು), ಬ್ರೊಮಿಥಾಲಿನ್, ರೆಡ್ ಸ್ವ್ಕಿಲ್, ನೋರ್ಬೋರ್ಮೈಡ್, ಕ್ರಿಮಿಡಿನ್ ಇತ್ಯಾದಿಗಳು ಇದ್ದರೂ ಸಹ ಅವುಗಳ ಬಳಕೆ ಅಷ್ಟು ಸಾಮಾನ್ಯವಾಗಿಲ್ಲ. ಕಾರಣ ರೈತರು ಜಾಗ್ರತೆಯಿಂದ ಇಲಿಪಾಷಾಣಗಳನ್ನು ಬಳಸಿದರೆ ಇವುಗಳಿಂದ ಪ್ರಾಣಿಗಳಲ್ಲಿ ವಿಷಬಾಧೆ ಆಗುವುದು ತಪ್ಪುತ್ತದೆ.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ:
ಡಾ:ಎನ್.ಬಿ.ಶ್ರೀಧರಎಮ್.ವಿ.ಎಸ್ ಸಿ,ಪಿ ಹೆಚ್.ಡಿ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ-577204

Email:sridhar_vet@rediffmail.com


error: Content is protected !!