
- ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಭಾಗಿ
- ಜಿಲ್ಲೆಯ ಸಣ್ಣ ನೀರಾವರಿ ಯೋಜನೆಗಳ ಸಮಗ್ರ ಮಾಹಿತಿ ಮತ್ತು ಪರಿಶೀಲನೆ
ಬೆಂಗಳೂರು ಸೆ. 26: ರಾಜ್ಯದಲ್ಲಿ ಜಲಮೂಲಗಳ ಕೊರತೆ ಇಲ್ಲ. ಆದರೆ, ನೀರಿನ ಸದ್ಬಳಕೆಯಾಗದೆ ಬೇಸಿಗೆಯಲ್ಲಿ ಬರದ ಪರಿಸ್ಥಿತಿ ಎದುರಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಜಲಮೂಲಗಳಲ್ಲಿನ ನೀರಿನ ಸದ್ಬಳಕೆಗೆ ಅಗತ್ಯ ಯೋಜನೆಗಳನ್ನ ರೂಪಿಸಲು ಒತ್ತು ನೀಡಬೇಕು ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ ಯೋಜನೆ ಮತ್ತು ಕಾಮಗಾರಿಗಳ ಪರಿಶೀಲನೆ ನಡೆಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸಭೆಯಲ್ಲಿ ಪಾಲ್ಗೊಂಡು ಸಣ್ಣ ನೀರಾವರಿ ಯೋಜನೆಗಳ ಬಗ್ಗೆ ವಿಸ್ತ್ರುತ ಮಾಹಿತಿ ಪಡೆದುಕೊಂಡರು.
ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಜಲಮೂಲಗಳಿಗೆ ಕೊರತೆಯಿಲ್ಲ. ಉತ್ತಮ ಮಳೆಯೂ ಆಗುತ್ತದೆ. ಆದರೆ, ನೀರನ್ನ ಸಮರ್ಪಕವಾಗಿ ಬಳಸಲು ಅಗತ್ಯ ಯೋಜನೆಗಳು ಇಲ್ಲದ ಕಾರಣ ನೀರು ಹರಿದು ಹೋಗುತ್ತಿದೆ. ಇವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ದಿ ಮತ್ತು ನೀರಿನ ಸಮರ್ಪಕ ಬಳಕೆಗೆ ಯೋಜನೆಗಳ ಅಗತ್ಯವಿದೆ ಎಂದು ಹೇಳಿದರು.
ಜಲಮೂಲಗಳ ನೀರಿನ ಸದ್ಬಳಕೆಗೆ ಒತ್ತು ನೀಡಿ:
ರಾಜ್ಯದಲ್ಲಿ ಜಲಮೂಲಗಳ ಕೊರತೆ ಇಲ್ಲ. ಆದರೆ, ಅದರಲ್ಲಿನ ನೀರಿನ ಸದ್ಬಳಕೆ ನಿರೀಕ್ಷತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಜಲಮೂಲಗಳಲ್ಲಿನ ನೀರಿನ ಉಳಿತಾಯ, ಸಮರ್ಪಕ ಬಳಕೆಯಿಂದ ಅಂತರ್ಜಲ ಹೆಚ್ಚಳ ಸಾಧ್ಯ. ಅಲ್ಲದೇ, ಬರದಂತಹ ಪರಿಸ್ಥಿತಿಯಲ್ಲಿ ಈ ಯೋಜನೆಗಳು ನಮ್ಮ ಕೈ ಹಿಡಿಯುತ್ತವೆ. ಕೆರೆಗಳನ್ನು ತುಂಬಿಸುವ, ನೀರನ್ನ ಸಂಗ್ರಹಿಸಿ ಅಂತರ್ಜಲ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಯೋಜನೆಗಳಿಗೆ ಒತ್ತು ನೀಡಬೇಕು ಎಂದು ಸಚಿವ ಎನ್ ಎಸ್ ಭೋಸರಾಜು ಸೂಚನೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಸಣ್ಣ ನೀರಾವರಿ ಯೋಜನೆಗಳು:
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಪ್ರಸ್ತುತ 57 ಕಾಮಗಾರಿಗಳು ಪ್ರಗತಿಯಲ್ಲಿವೆ. ಇವುಗಳಲ್ಲಿ 27 ಕೆರೆಗಳ ಅಭಿವೃದ್ದಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 1300 ಕೆರೆಗಳಿವೆ. ಬೇಸಿಗೆಯ ಸಮಯದಲ್ಲಿ ಜಿಲ್ಲೆಯಲ್ಲಿ ನೀರಿನ ಅಭಾವ ಕಂಡು ಬರುತ್ತದೆ. ನೀರಿನ ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ಕೆರೆಗೆ ನೀರು ತುಂಬಿಸುವ ಏತ ನೀರಾವರಿ ಕಾಮಗಾರಿಗಳನ್ನು ಕೈಗೊಳ್ಳುವ ಅವಶ್ಯಕತೆಯಿದ್ದು, ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನ ಚುರುಕುಗೊಳಿಸಬೇಕು ಎಂದು ಸಚಿವ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಗತಿಯಲ್ಲಿರುವ ಏತ ನೀರಾವರಿ ಯೋಜನೆಗಳನ್ನ ಕಾಲಮಿತಿಯಲ್ಲಿ ಪೂರ್ಣಗೊಳಿಸಿ:
29 ಕೆರೆಗಳಿಗೆ ನೀರು ತುಂಬಿಸುವ ಹೊಳೆ ಹಸನವಾಡಿ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ 12 ಕೆರೆಗಳನ್ನು ತುಂಬಿಸುವ ಕಾರ್ಯವನ್ನು ಡಿಸೆಂಬರ್ ತಿಂಗಳೊಳಗಾಗಿ ಮುಗಿಸಬೇಕು. ಮಂಡಗದ್ದೆ ಏತ ನೀರಾವರಿ ಯೋಜನೆಯೂ ಕೊನೆಯ ಹಂತದಲ್ಲಿದ್ದು ಅದನ್ನೂ ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ದಗೊಳಿಸಿ ಎಂದು ಸಚಿವರು ಸೂಚನೆ ನೀಡಿದರು.
ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಗೆ ಭೇಟಿ:
ಅಕ್ಟೋಬರ್ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆಯ ಕಾಮಗಾರಿಗಳ ವಸ್ತುಸ್ಥಿತಿಯ ಬಗ್ಗೆ ವರದಿಯನ್ನು ನೀಡುವಂತೆ ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಭೋಸರಾಜು ಸೂಪರಿಂಟೆಂಡೆಂಟ್ ಇಂಜಿನಿಯರ್ ಗೆ ಸೂಚನೆ ನೀಡಿದರು.
ಯಾವುದೇ ಯೋಜನೆ ಪೂರ್ಣಗೊಂಡು ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು. ಆಗ ಮಾತ್ರ ಆ ಯೋಜನೆಯನ್ನು ಕೈಗೊಂಡ ಉದ್ದೇಶ ಪೂರ್ಣಗೊಳ್ಳುತ್ತದೆ. ಏತ ನೀರಾವರಿ ಯೋಜನೆಯ ಫಲಾನುಭವಿಗಳಾದ ರೈತರು ಮತ್ತು ಜನರಿಗೆ ನೀರು ತಲುಪಬೇಕು. ಅವರಿಗೆ ಆಗುತ್ತಿರುವ ಅನಾನುಕೂಲಗಳನ್ನು ಸರಿಪಡಿಸಬೇಕು ಆಗ ಮಾತ್ರ ಕಾಮಗಾರಿಯ ಉದ್ದೇಶ ಸಫಲವಾಗುತ್ತದೆ. ಕಾಮಗಾರಿ ಪೂರ್ಣಗೊಂಡು ಸಣ್ಣ ಸಣ್ಣ ಸಮಸ್ಯೆಗಳಿಂದ ಫಲಾನುಭವಿಗಳಿಗೆ ಅನುಕೂಲವಾಗದೇ ಇದ್ದಲ್ಲಿ ಕಾಮಗಾರಿಯ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಶಿವಮೊಗ್ಗ ವಿಭಾಗದ ಮುಖ್ಯ ಇಂಜಿನೀಯರ್ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.