ಕುವೆಂಪು ವಿವಿಯ ಅಧ್ಯಾಪಕರೊಂದಿಗೆ ಡೆಪ್ಯೂಟಿ ಕೌನ್ಸಲ್ ಜನರಲ್ ಸಂವಾದ

‘ಕುವೆಂಪು ವಿವಿ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯ ಸಹಕಾರ’
ಶಂಕರಘಟ್ಟ, ಸೆ. 29: ಬೆಂಗಳೂರಿನಲ್ಲಿರುವ ಜಪಾನ್ ದೇಶದ ಕಾನ್ಸುಲೇಟ್ನ ಡೆಪ್ಯೂಟಿ ಕೌನ್ಸಲ್ ಜನರಲ್ ಮಾರೋವ್ ಕಟ್ಸುಮಾಸಾ ಅವರು ಕುವೆಂಪು ವಿವಿಯ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಶೈಕ್ಷಣಿಕ ಸಂಶೋಧನಾ ಒಪ್ಪಂದಗಳು ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳಿಗಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಬೆಂಗಳೂರಿನಲ್ಲಿರುವ ಜಪಾನ್ ದೇಶದ ಕಾನ್ಸುಲೇಟ್ನ ಡೆಪ್ಯೂಟಿ ಕೌನ್ಸಲ್ ಜನರಲ್ ಮಾರೋವ್ ಕಟ್ಸುಮಾಸಾ ಮತ್ತು ಭಾರತ-ಜಪಾನ್ ದೇಶಗಳ ವಾಣಿಜ್ಯ ಮತ್ತು ಔದ್ಯೋಗಿಕ ಮಂಡಳಿಯ ವ್ಯವಸ್ಥಾಪಕರಾದ ಸವಿತಾ ಎ. ಎಸ್. ಅವರು ಗುರುವಾರ ಕುವೆಂಪು ವಿವಿಗೆ ಭೇಟಿನೀಡಿದ್ದು, ಜಪಾನ್ನ ಶಿಕ್ಷಣ ಸಂಸ್ಥೆಗಳು ಮತ್ತು ಕುವೆಂಪು ವಿವಿಯ ನಡುವಿನ ಶೈಕ್ಷಣಿಕ-ಸಂಶೋಧನಾ ಚಟುವಟಿಕೆಗಳ ವಿನಿಮಯದ ಸಾಧ್ಯತೆಗಳ ಕುರಿತು ಚರ್ಚಿಸಿದರು.
ವಿವಿಯಲ್ಲಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ನಿಕಾಯಗಳ ನಿರ್ದೇಶಕರು ಮತ್ತು ಉನ್ನತ ಪ್ರಾಧ್ಯಾಪಕರೊಂದಿಗೆ ಸಭೆ ನಡೆಸಿದ ಅವರು ವಿವಿಯಲ್ಲಿನ ಗುಣಮಟ್ಟದ ಶಿಕ್ಷಣ, ಸಂಶೋಧನಾ ಚಟುವಟಿಕೆಗಳು, ಗ್ರಾಮೀಣ ವಿದ್ಯಾರ್ಥಿಗಳ ಸೃಜನಶೀಲತೆಗಳ ಕುರಿತು ಮಾಹಿತಿ ಪಡೆದು ಮೆಚ್ಚುಗೆ ಸೂಚಿಸಿದರು. ಮುಂಬರುವ ದಿನಗಳಲ್ಲಿ ಜಪಾನ್ನ ವಿವಿಗಳು, ಶಿಕ್ಷಣ ಸಂಸ್ಥೆಗಳೊಂದಿಗೆ ಕುವೆಂಪು ವಿವಿಯು ಶೈಕ್ಷಣಿಕ ಮತ್ತು ಸಂಶೋಧನಾ ವಿಷಯಗಳಲ್ಲಿ ವಿದ್ಯಾರ್ಥಿ ವಿನಿಮಯ, ಒಪ್ಪಂದಗಳನ್ನು ಕೈಗೊಳ್ಳಲು ಮುಂದಾದಲ್ಲಿ ಕಾನ್ಸುಲೇಟ್ ವತಿಯಿಂದ ಸಂಪೂರ್ಣ ಸಹಕಾರ, ನೆರವು ನೀಡಲಾಗುವುದು ಎಂದು ಬೋಧಕರನ್ನು ಉತ್ತೇಜಿಸಿದರು.
ಈ ಸಂದರ್ಭದಲ್ಲಿ ಫಿಜಿಟ್ಸು ಕನ್ಸಲ್ಟಿಂಗ್ ಇಂಡಿಯ ಸಂಸ್ಥೆಯ ಹಿರಿಯ ಮುಖ್ಯಸ್ಥರಾದ ಸವೀನ್ ಚಂದ್ರಶೇಖರ್, ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್. ಪ್ರೊ. ರಿಯಾಜ್ ಅಹಮದ್, ಕೆ. ಐಕ್ಯೂಎಸಿ ವಿಭಾಗದ ಪ್ರೊ. ವೈ ಎಲ್ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಅಧ್ಯಾಪಕರು ಸಭೆಯಲ್ಲಿ ಹಾಜರಿದ್ದರು.