ಪ್ರಧಾನಿಯವರ ನೇತೃತ್ವದಲ್ಲಿ ಸಮಗ್ರ ಅಭಿವೃದ್ದಿ : ಬಿ.ವೈ.ರಾಘವೇಂದ್ರ

ಶಿವಮೊಗ್ಗ ಮೇ 31: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿವಿಧ ಜನ ಕಲ್ಯಾಣ ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುತಿದ್ದು, ಅವರ ನೇತೃತ್ವದ ಪ್ರತಿಫಲವಾಗಿ ದೇಶದಲ್ಲಿ ಸಮಗ್ರ ಅಭಿವೃದ್ದಿ ಸಾಧಿಸಲಾಗುತ್ತಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.
ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ದೇಶದ ಪ್ರಧಾನಮಂತ್ರಿಗಳು ಮೇ 31 ರಂದು ಬೆಳಿಗ್ಗೆ 11 ಗಂಟೆಗೆ ಹಿಮಾಚಲ ಪ್ರದೇಶದ ಶಿಮ್ಲಾದಿಂದ ಕೇಂದ್ರ ಸರ್ಕಾರದ ಒಂಭತ್ತು ಸಚಿವಾಲಯದ ಸುಮಾರು 16 ಯೋಜನೆ-ಕಾರ್ಯಕ್ರಮಗಳ ಫಲಾನುಭವಿಗಳೊಂದಿಗೆ ವರ್ಚುವಲ್ ವೇದಿಕೆ ಮೂಲಕ ಸಂವಾದ ಕಾರ್ಯಕ್ರಮವನ್ನು ನಡೆಸುತ್ತಿರುವ ಹಿನ್ನೆಲೆ ಇಂದು ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡ ಪರಿಶ್ರಮದಿಂದ ಸಾಮಾನ್ಯ ಮತ್ತು ಬಡ ಜನರಿಗೆ ಅನೇಕ ಜನ ಕಲ್ಯಾಣ ಯೋಜನೆಗಳನ್ನು ತಲುಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರ ಸರ್ಕಾರಕ್ಕೆ ಎರಡು ಅವಧಿ ಸೇರಿ ಇದೀಗ 8 ವರ್ಷ ಪೂರ್ಣಗೊಂಡಿದೆ. ಅವರ ನೇತೃತ್ವದಲ್ಲಿ ದೇಶ ಸರ್ವಾಂಗೀಣ ಅಭಿವೃದ್ದಿ ಕಾಣುತ್ತಿದೆ. ಅಕ್ಕಪಕ್ಕದ ದೇಶದಲ್ಲಿ ಅಕ್ಕಿ, ವಿದ್ಯುತ್ ಎಲ್ಲ ದುಬಾರಿಯಾಗಿದ್ದು, ಜನ ಕತ್ತಲಲ್ಲಿದ್ದಾರೆ. ಆದರೆ ನಮ್ಮ ಪ್ರಧಾನಿಯವರು ಇಂತಹ ಸಂದರ್ಭದಲ್ಲೂ ಆರ್ಥಿಕವಾಗಿ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜನತೆಯ ಕೈಹಿಡಿದು ಎಲ್ಲರಿಗೂ 2 ಡೋಸ್ ಕೋವಿಡ್ ಲಸಿಕೆ ನೀಡುವ ಕೆಲಸ ಮಾಡಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು ಸೇರಿಂತೆ ಎಲ್ಲರ ಪರಿಶ್ರಮದ ಜೊತೆಗೆ ಮೋದಿಜಿವಯರ ನೇತೃತ್ವದಲ್ಲಿ ಸಮಗ್ರ ಹೆಜ್ಜೆಗಳನ್ನು ಇಡಲಾಗುತ್ತಿದ್ದು, ಈ ಸಂದರ್ಭದಲ್ಲಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಪಾರದರ್ಶಕತೆ ಏಕೆ ಬೇಕೆಂದು ಪ್ರಧಾನಿ ಮೋದಿಯವರು ತೋರಿಸಿದ್ದಾರೆ. ಯೋಜನೆ, ಸೌಲಭ್ಯಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪಿಸುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ 20 ಕೋಟಿ ಮಹಿಳೆಯರ ಬ್ಯಾಂಕ್ ಖಾತೆ ಇದ್ದು ನೇರವಾಗಿ ಅವರಿಗೆ ಯೋಜನೆಗಳ ಸೌಲಭ್ಯ ದೊರೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸೌಲಭ್ಯಗಳು ಎಲ್ಲ ಅರ್ಹರಿಗೆ ತಲುಪಿದಾಗ ಮಾತ್ರ ಆ ಯೋಜನೆ ಸಾರ್ಥಕವಾಗುತ್ತದೆ. ಇಂದು ಜನ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ನೇರವಾಗಿ ಮಾತನಾಡಿದ್ದು ಸಂತಸ ತಂದಿದೆ. ಸಂಸತ್ ಸದಸ್ಯರು ಪ್ರತಿ ಗ್ರಾಮಗಳಿಗೆ ಯೋಜನೆಗಳನ್ನು ತಲುಪಿಸುತ್ತಿರುವುದು ಅಭಿನಂದನೀಯವಾಗಿದ್ದು ಡಿಸಿ, ಜಿ.ಪಂ ಸಿಇಓ ರವರ ಕಾರ್ಯ ಕೂಡ ಅಭಿನಂದನಾರ್ಹವಾಗಿದೆ. ಫಲಾನುಭವಿಗಳು ಸಹ ಇತರರಿಗೆ ತಾವು ಪಡೆದ ಸೌಲಭ್ಯಗಳ ಬಗ್ಗೆ ತಿಳಿಸಿ ಸಹಾಯ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ 12 ಜನ ಕಲ್ಯಾಣ ಯೋಜನೆಗಳ ಫಲಾನುಭವಿಗಳೊಂದಿಗೆ ಸಂಸದರು ಮತ್ತು ಶಾಸಕರು ಸಂವಾದಿಸಿದರು. ಶಾಸಕರಾದ ಕೆ.ಬಿ.ಅಶೋಕ್‍ನಾಯ್ಕ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

   ಮುದ್ರ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ 94,350 ಫಲಾನುಭವಿಗಳಿದ್ದು ಈವರೆಗೆ ರೂ.700.30 ಕೋಟಿ ಸಾಲ ನೀಡಲಾಗಿದೆ. ಸ್ವಚ್ಚ ಭಾರತ್ ಮಿಷನ್(ಗ್ರಾಮೀಣ) ಅಡಿ 98,655 ಮತ್ತು ಸ್ವಚ್ಚ ಭಾರತ್ ಮಿಷನ್(ನಗರ) 6784 ಫಲಾನುಭವಿಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಮಾತೃ ವಂದನಾ ಯೋಜನೆಯಡಿ 51,263 ಮತ್ತು ಪೋಷಣ್ ಅಭಿಯಾನದಡಿ 1,43,893 ಫಲಾನುಭವಿಗಳು ವಿವಿಧ ಕಂತುಗಳಲ್ಲಿ ಹಣ ಪಡೆದಿದ್ದಾರೆ. ಜಲಜೀವನ್ ಮಿಷನ್ ಯೋಜನೆಯಡಿ 1,92,325 ಫಲಾನುಭವಿಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 1.51 ಲಕ್ಷ ರೈತರಿಗೆ ಸಹಾಯಧನ ನೀಡಲಾಗಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ 4811 ಫಲಾನುಭವಿಗಳು ರೂ.10 ಸಾವಿರ ಮತ್ತು 972 ಜನರು ರೂ.20 ಸಾವಿರ ಸಾಲ ಪಡೆದಿದ್ದಾರೆ. ವಸತಿ ಯೋಜನೆಯಡಿ ನಗರದಲ್ಲಿ 3221 ಮನೆಗಳು ಮತ್ತು ಗ್ರಾಮೀಣ ಭಾಗದಲ್ಲಿ 1595 ಮನೆಗಳನ್ನು ನೀಡಲಾಗಿದೆ. ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ 3,88,907 ಫಲಾನುಭವಿಗಳು, ಉಜ್ವಲ ಯೋಜನೆಯಡಿ 77,086 ಮತ್ತು ಒಂದು ದೇಶ ಒಂದು ಪಡಿತರ ಯೋಜನೆಯಡಿ 23,154 ಫಲಾನುಭವಿಗಳಿದ್ದಾರೆ.

–ಎಂ.ಎಲ್.ವೈಶಾಲಿ, ಜಿ.ಪಂ ಸಿಇಓ

        ನಮ್ಮ ಊರಿನಲ್ಲಿ ನನಗೆ ವೈಯಕ್ತಿಕ ಶೌಚಾಲಯವಿಲ್ಲದ ಕಾರಣ ಬಯಲಿನಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದೆ. ಒಂದು ರೀತಿಯ ಭಯ, ಅವಮಾನವಾದಂತೆ ಆಗುತ್ತಿತ್ತು. ಸ್ವಚ್ಚ ಭಾರತ್ ಮಿಷನ್‍ನಡಿ ಅರ್ಜಿ ಸಲ್ಲಿಸಿ ಮಂಜೂರಾತಿ ಪಡೆದು ರೂ.15 ಧನಸಹಾಯದಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡು ಈಗ ಗೌರವಯುತವಾಗಿ ಉಪಯೋಗಿಸುತ್ತಿದ್ದೇನೆ. ಸರ್ಕಾರಕ್ಕೆ ಧನ್ಯವಾದಗಳು
                                             -ರುದ್ರಮ್ಮ, ಫಲಾನುಭವಿ
  ಮಾತೃವಂದನೆ ಯೋಜನೆಯಡಿ ನೀಡಲಾಗುತ್ತಿರುವ ಹಣದಿಂದ ನನ್ನ ವೈದ್ಯಕೀಯ, ಪೋಷಣೆಗೆ ಸಂಬಂಧಿಸಿದ ಖರ್ಚಿಗೆ ಬಹಳ ಅನುಕೂಲವಾಗಿದೆ.
                                  -ನೂರುನ್ನೀಸಾ ಇರ್ಫಾನ್, ಫಲಾನುಭವಿ
  ನಾನು ಮೂಲತಃ ಮಧ್ಯಪ್ರದೇಶದ ಗ್ವಾಲಿಯರ್‍ನವನು ಬಟ್ಟೆ ವ್ಯಾಪಾರಕ್ಕೆಂದು ಕರ್ನಾಟಕಕ್ಕೆ ಬಂದಿದ್ದು, ಒನ್ ನೇಷನ್ ಒನ್ ರೇಷನ್ ಕಾರ್ಡ್‍ನಿಂದಾಗಿ ಇಲ್ಲಿಯೂ ಸಹ ನನಗೆ ಪಡಿತರ ದೊರೆಯುತ್ತಿದ್ದು, ಜೀವನ ನಿರ್ವಹಣೆಗೆ ತುಂಬಾ ಸಹಾಯವಾಗಿದೆ.
                                 -ಭಾನುರಾವತ್ ಗ್ವಾಲಿಯರ್, ಫಲಾನುಭವಿ
   ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಟೈಲರಿಂಗ್ ಮಾಡಿ, ನಂತರ ಸ್ವಂತ ಬಟ್ಟೆವ್ಯಾಪಾರ ಮಾಡುತ್ತಾ, ಇತರರಿಗೂ ಈ ಸೌಲಭ್ಯದ ಬಗ್ಗೆ ತಿಳಿಸಿದ್ದೇನೆ. 
                                             -ಶ್ವೇತಾ, ಫಲಾನುಭವಿ

ನಗರ ಪ್ರದೇಶದಲ್ಲಿ ಮನೆ ಕಟ್ಟಿಸುವುದು ಕನಸಾಗಿದ್ದ ನನಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಸೌಲಭ್ಯ ಪಡೆದು ಈಗ ಮನೆ ಕಟ್ಟಿಸಿಕೊಂಡು ನೆಮ್ಮದಿಯಾಗಿದ್ದೇನೆ.
-ಕೃಷ್ಣಪ್ಪ, ಫಲಾನುಭವಿ

error: Content is protected !!