ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣವು ಕುವೆಂಪು ಸಿದ್ದಾಂತಗಳ ಪರಿಕಲ್ಪನೆಯ 24 ದಿನಗಳ ಮಕ್ಕಳ ಬೇಸಿಗೆ ಶಿಬಿgವನ್ನು ಆಯೋಜಿಸಿತ್ತು. ಸಮಾರೋಪ ಸಮಾರಂಭ ಮತ್ತು ಕುವೆಂಪು ಚಿಣ್ಣರ ರಂಗೋತ್ಸವಕ್ಕೆ ದಿನಾಂಕ:02-05-2022 ರಂದು ಸಂಜೆ ಗಣ್ಯರು ಕೋಲು ಕೊಡುವುದರ ಮೂಲಕ ಚಾಲನೆ ನೀಡಿದರು.
ಮಕ್ಕಳಿಂದ ಕೋಲಾಟ, ಸೋಮನಕುಣಿತ, ರಂಗದ ಕುಣಿತ ಮುಂತಾದ ಜಾನಪದ ನೃತ್ಯಗಳು ಪ್ರದರ್ಶನಗೊಂಡವು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದ ಉಪಾಧ್ಯಕ್ಷರಾದ ಶ್ರೀ ಎಸ್.ದತ್ತಾತ್ರಿ, ರಂಗಸಮಾಜದ ಸದಸ್ಯರರಾದ ಶ್ರೀ ಆರ್.ಎಸ್.ಹಾಲಸ್ವಾಮಿ, ರಂಗಾಯಣ ಶಿವಮೊಗ್ಗದ ನಿರ್ದೇಶಕರಾದ ಶ್ರೀ ಸಂದೇಶ ಜವಳಿ, ಆಡಳಿತಾಧಿಕಾರಿ ಡಾ. ಶೈಲಜಾ ಎ. ಸಿ. ಹಾಗೂ ಶಿಬಿರದ ನಿರ್ದೇಶಕರಾದ ಶ್ರೀ ಪ್ರವೀಣ್ ಬೆಳ್ಳಿ ಭಾಗವಹಿಸಿದ್ದರು. ಶಿಬಿರದ ಮಕ್ಕಳು ಕುವೆಂಪುರವರ ರಚನೆಯ ಓ ನನ್ನ ಚೇತನಾ.. ಆಗು ನೀ ನನ್ನ ಅನಿಕೇತನ.. ಸಾಮೂಹಿಕ ಗೀತೆಯನ್ನು ಹಾಡಿದರು. ಶಿಬಿರದ ಮಕ್ಕಳು ಮತ್ತು ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಭಾ ಕಾರ್ಯಕ್ರಮದ ನಂತರ ಬಿ.ವಿ.ಕಾರಂತರ ರಚನೆಯ, ಶ್ವೇತಾ ಎಸ್.ಎನ್. ಮತ್ತು ಶ್ರೀವತ್ಸ ನಿರ್ದೇಶನದ ‘ಹೆಡ್ಡಾಯಣ’ ಹಾಗೂ ಗಜಾನನ ಶರ್ಮಾ ರಚನೆಯ ಮಹಾಬಲೇಶ್ವರ ಬಿ.ಕೆ. ಹಾಗೂ ಸವಿತಾಕಾಳಿ ನಿರ್ದೇಶನದ ‘ಹಂಚಿನ ಮನೆ ಪರಸಪ್ಪ’ ನಾಟಕ ಪ್ರದರ್ಶನಗಳು ನಡೆದವು.
ದಿನಾಂಕ:03.05.2022 ರಂದು ಸಂಜೆ 6.00ಕ್ಕೆ ಲೀಲಾ ಗರಡಿ ರಚನೆಯ ಸುಜಿತ್ ಕಾರ್ಕಳ ಮತ್ತು ಶ್ರೀಶ ಭಟ್ ನಿರ್ದೇಶನದ ‘ಉಷ್ಣೀಷ’, ಕುವೆಂಪುರವರ ರಚನೆಯ, ರವಿಕುಮಾರ್ ಎಸ್.ಎಮ್. ಮತ್ತು ದೀಪ್ತಿ ಎಮ್.ಹೆಚ್. ನಿರ್ದೇಶನದ ‘ನನ್ನ ಗೋಪಾಲ’ ಹಾಗೂ ಬಿಳಿಗೆರೆ ಕೃಷ್ಣಮೂರ್ತಿ ರಚನೆಯ ಕಾರ್ತಿಕ್ ಕಲ್ಲುಕುಟಿಕರ್ ಮತ್ತು ಪ್ರಸನ್ನಕುಮಾರ್ ಆರ್ ನಿರ್ದೇಶನದ ‘ಅಗಲಕಿವಿಯ ಅರಿವುಗಾರ’ ನಾಟಕಗಳು ಪ್ರದರ್ಶನಗೊಂಡವು. ದಿನಾಂಕ:04.05.2022 ರಂದು ಮಕ್ಕಳ ಸಂತೆ ನಡೆಯಿತು. ಇದರಲ್ಲಿ ಮಕ್ಕಳು ತಾವು ಮನೆಗಳಿಂದ ಸಿದ್ಧಪಡಿಸಿಕೊಂಡು ತಂದಂತಹ ತಿನಿಸುಗಳನ್ನು ಮಾರಾಟ ಮಾಡಿದರು.