ಶಿವಮೊಗ್ಗ, ಡಿಸೆಂಬರ್ 26 : ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ ರಾಜನೆಂದು ಪರಿಗಣಿಸಬೇಕು. ಮಾರುಕಟ್ಟೆಯ ಎಲ್ಲಾ ಕಾರ್ಯ ಮತ್ತು ಚಟುವಟಿಕೆಗಳು ಗ್ರಾಹಕರ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶದಿಂದ ಗ್ರಾಹಕರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಬಳಕೆದಾರರ ವೇದಿಕೆ ಅಧ್ಯಕ್ಷ ಬಿ.ವಿ. ಗೋಪಾಕೃಷ್ಣ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾನೂನು ಮಾಪನಾ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಜಿಲ್ಲಾ ಬಳಕೆದಾರರ ವೇದಿಕೆ ಇವರುಗಳ ಸಂಯಕ್ತಾಶ್ರಯದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಭಾರತದಾದ್ಯಂತ ಡಿಸೆಂಬರ್ 24 ನ್ನು ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವೆಂದು ಆಚರಿಸಲಾಗುತ್ತದೆ. 1986 ಡಿಸೆಂಬರ್ 24 ರಂದು ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ದಿನ. ಗ್ರಾಹಕರ ಹಿತರಕ್ಷಣೆಯ ಪ್ರಾಮುಖ್ಯವನ್ನು ಗ್ರಾಹಕರ ಮತ್ತು ವ್ಯಾಪಾರಿ ಸಂಸ್ಥೆಗಳ ದೃಷ್ಟಿಯಿಂದ ತಿಳಿಯಬಹುದು. ಗ್ರಾಮೀಣ ಭಾಗದ ಜನರಿಗೆ ಗ್ರಾಹಕರ ರಕ್ಷಣಾ ಕಾಯ್ದೆ ಬಗ್ಗೆ ಮಾಹಿತಿ ನೀಡುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಪ್ರತಿ ತಾಲೂಕಿನಲ್ಲಿ ಸುಮಾರು 25-30 ಎನ್.ಜಿ.ಓ. ಗಳು ಜನರಿಗೆ ಗ್ರಾಹಕರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಲುಪಿಸುವಂತಹ ಕಾರ್ಯಗಳನ್ನು ಮಾಡಿಕೊಂಡು ಬಂದಿವೆ. ಪ್ರತಿಯೊಬ್ಬರಿಗೂ ಸಾಮಾನ್ಯ ಜ್ಞಾನ ಪಡೆಯುವುದು ಮುಖ್ಯವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಳಕೆದಾರರ ವೇದಿಕೆಯ ಕಾರ್ಯದರ್ಶಿ ಬಿ.ಎಸ್.ನಾಗರಾಜ ಮಾತನಾಡಿ, ಗ್ರಾಹಕನೆಂದರೆ ಹಣವನ್ನು ಪಾವತಿಸುವ ವಾಗ್ದಾನದ ಮೇರೆಗೆ ಸರಕು ಅಥವಾ ಸೇವೆಗಳನ್ನು ಸ್ವಂತ ಉಪಯೋಗಕ್ಕಾಗಿ ಖರೀದಿಸುವವನು ಎಂದು ತಿಳಿಸಿದರು.
ತಾಯಿಯ ಗರ್ಭದಿಂದ ಜನಿಸುವ ಮಗುವು ಗ್ರಾಹಕನಾಗಿ ಹುಟ್ಟುತ್ತದೆ. ಪ್ರತಿದಿನವೂ ನಾವು ಬೆಳಗ್ಗೆ ಗ್ರಾಹಕರಾಗಿ ನಮ್ಮ ದೈನಂದಿನ ಚಟುವಟಿಕೆಗಳನ್ನು ಆರಂಭಿಸುವುದು ಎಂದರು.
ಕೇಂದ್ರ ಸರ್ಕಾರ ಗ್ರಾಹಕರ ರಕ್ಷಣಾ ಕಾಯ್ದೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಹಕರ ಮಾಹಿತಿ ಕೇಂದ್ರ ಮತ್ತು ಗ್ರಾಹಕರ ನ್ಯಾಯಾಲಯಗಳನ್ನು ಸ್ಥಾಪಿಸಿದೆ. ದೇಶ್ಯಾದ್ಯಂತ ಜಿಲ್ಲಾ ಮತ್ತು ರಾಜ್ಯ ಹಾಗೂ ರಾಷ್ಟ್ರೀಯ ಪರಿಹಾರ ಗ್ರಾಹಕರ ನ್ಯಾಯಾಲಯಗಳ ವೇದಿಕೆಗಳನ್ನು ಸ್ಥಾಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿ.ಎಂ. ಚಂಚಲ, ಸಹ್ಯಾದ್ರಿ ವಿಜ್ಞಾನ ಕಾಲೇಜು ಪ್ರಾಂಶುಪಾಲೆ ಕೆ.ಆರ್. ಶಶಿರೇಖಾ, ಬಳಕೆದಾರರ ಪತ್ರಿಕೆ ಸಂಪಾದಕ ಸಿ.ಎಲ್. ರಮೇಶ್ ಮತ್ತು ಸಿಬ್ಬಂದಿಗಳು, ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!