ಶಿವಮೊಗ್ಗ: ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿರುವ ಗೌರವಧನ ಹಾಗೂ ದಿನಭತ್ಯೆ ಹೆಚ್ಚಿಸುವಂತೆ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಸೇರಿದಂತೆ ಅನೇಕ ಶಾಸಕರು ಗ್ರಾಮೀಣಾಭಿವೃದ್ಧಿ ಸಚಿವರು, ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿರುವ ಗೌರವಧನ ಹಾಗೂ ದಿನಭತ್ಯೆ ಹೆಚ್ಚಳ ಮಾಡಬೇಕೆಂಬುದು ಶಾಸಕರ ಬೇಡಿಕೆಯಾಗಿದೆ. ಈ ಸಂಬಂಧ ಅನೇಕ ವರ್ಷಗಳಿಂದ ಚರ್ಚೆ ಆಗುತ್ತಿದ್ದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಸಮಸ್ಯೆಗೆ ಪರಿಹಾರವು ಸಿಕ್ಕಿಲ್ಲ , ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುವ ಗೌರವಧನ ಅತ್ಯಂತ ಕಡಿಮೆ ಆಗಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಓಡಾಟ ನಡೆಸಲು ಹೆಚ್ಚಿನ ಸಮಯ ಮೀಸಲಿಡಬೇಕಾದ ಅವಶ್ಯಕತೆ ಇರುತ್ತದೆ. ಚುನಾವಣೆ ಮುನ್ನವು ಗೌರವಧನ ಹೆಚ್ಚಿಸುವ ಭರವಸೆ ಸಚಿವರಿಂದ ಸಿಕ್ಕಿತ್ತು. ಆದ್ದರಿಂದ ಸರ್ಕಾರ ವಿಷಯಕ್ಕೆ ಆದ್ಯತೆ ನೀಡಿ ಬೇಡಿಕೆ ಈಡೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಗೌರವಧನ ಹಾಗೂ ದಿನಭತ್ಯೆ ಹೆಚ್ಚಿಸುವ ಕುರಿತಾಗಿ ರಾಜ್ಯದಲ್ಲಿ ನಡೆಯುತ್ತಿರುವ ಅಧಿವೇಶನ ಮುಗಿಯುವ ಒಳಗಾಗಿ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಎಲ್ಲ ಶಾಸಕರ ಅಭಿಪ್ರಾಯವಾಗಿದೆ. ಆರ್ಥಿಕ ಇಲಾಖೆಯಿಂದಲೂ ಮೇಲ್ಕಂಡ ವಿಷಯದ ಬೇಡಿಕೆ ಕುರಿತು ಸಕರಾತ್ಮಕ ಪ್ರತಿಕ್ರಿಯೆ ಬರುವ ನೀರಿಕ್ಷೆಯಿದೆ.
ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿರುವ ಗೌರವಧನ ಹಾಗೂ ದಿನಭತ್ಯೆ ಹೆಚ್ಚಳ ಮಾಡುವ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ನೇತೃತ್ವದಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ಎಲ್ಲ ಶಾಸಕರ ಸಹಿ ಸಂಗ್ರಹಿಸಿ ಬೇಡಿಕೆ ಈಡೇರಿಸುವಂತೆ ಸಚಿವರು, ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿದೆ.