ಶಿವಮೊಗ್ಗ: ಸಮಾಜದಲ್ಲಿ ಗುರುವಿನ ಮಾಗದರ್ಶನ ಸಿಗುವುದರಿಂದ ಸದ್ಗತಿ ದೊರೆಯುತ್ತದೆ. ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ. ಶಿಕ್ಷಣ ಕಲಿಸಿದ ಮಾತ್ರಕ್ಕೆ, ಖಾವಿ ಧರಿಸಿದ ಮಾತ್ರಕ್ಕೆ ಗುರುವಾಗುವುದಿಲ್ಲ. ಗುರುವಿನ ಸದ್ಗುಣಗಳು ಆಚಾರ, ವಿಚಾರ, ನಡೆನುಡಿ ಮೂಲಕ ಗುರುವಿನ ಮಾರ್ಗದರ್ಶನ ಸಿಗುತ್ತದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ನಗರದ ಕಲ್ಲಳ್ಳಿಯ ಶಿವಗಂಗಾ ಯೋಗಕೇಂದ್ರದಲ್ಲಿ ಆಯೋಜಿಸಿದ್ದ ವ್ಯಾಸಪೂರ್ಣಿಮಾ, ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ತಂತ್ರಜ್ಞಾನ ಮುಂದುವರೆದಂತೆ ಗುರುವಿನಲ್ಲಿ ಭಕ್ತಿ ಭಾವ ಕಡಿಮೆ ಆಗುತ್ತಿದೆ. ಎಲ್ಲರೂ ಗೂಗಲ್ ಗುರುವಿನ ಮೊರೆ ಹೋಗುತ್ತಿದ್ದಾರೆ. ಗುರುವಿನ ಸಂಸ್ಕಾರ ಪಡೆದಲ್ಲಿ ಪ್ರತಿಯೊಬ್ಬರು ಜೀವನದಲ್ಲಿ ಪರಿಪೂರ್ಣ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ವಿ.ರುದ್ರಾರಾಧ್ಯ ಮಾತನಾಡಿ, ಶಿವಗಂಗಾ ಯೋಗಕೇಂದ್ರ ಶಿವಮೊಗ್ಗದಲ್ಲಿ ವ್ಯವಸ್ಥಿತವಾಗಿ ನಡೆಯಲು ಎಲ್ಲ ಶಿಕ್ಷಕರು, ಸಹ ಶಿಕ್ಷಕರ ಸೇವೆ ಮಹತ್ತರ ಕಾರಣ. ಪ್ರತಿಯೊಬ್ಬರ ಜೀವನದಲ್ಲಿ ಸನ್ಮಾರ್ಗ ತೋರಿಸುವವರೇ ನಿಜವಾದ ಗುರು. ಸರಿದಾರಿಯಲ್ಲಿ ನಡೆಯಲು ಕಾರಣ ಆಗುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳು ಗುರು ನೆರವಾಗುತ್ತಾನೆ ಎಂದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರು 30 ಶಾಖೆಯ ಯೋಗ ಶಿಕ್ಷಕರಿಗೆ ಗೌರವಿಸಿ ಅಭಿನಂದಿಸಿದರು. ಡಾ. ಗಾಯತ್ರಿದೇವಿ ಸಜ್ಜನ್ ಅವರ ವೈಚಾರಿಕ ಲೇಖನಗಳ ಸಂಗ್ರಹ ಪುಸ್ತಕವನ್ನು ಯೋಗ ಶಿಕ್ಷಕರಿಗೆ ನೀಡಲಾಯಿತು.
ಶಿವಗಂಗಾ ಯೋಗಕೇಂದ್ರದ ಟ್ರಸ್ಟಿ ಹಾಲಪ್ಪ, ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಯೋಗ ಶಿಕ್ಷಕರಾದ ಜಿ.ಎಸ್.ಓಂಕಾರ್, ಕಾಟನ್ ಜಗದೀಶ್, ಗಾಯತ್ರಿ ಸಜ್ಜನ್, ಜಿ.ವಿಜಯ್ಕುಮಾರ್, ರಾಜಶೇಖರ್, ವೀಣಾ ಶಿವಕುಮಾರ್, ವಿಜಯ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.