ಶಿವಮೊಗ್ಗ ಏಪ್ರಿಲ್ 11 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ ಕ್ಷಯರೋಗ ಮತ್ತು ಅದರ ನಿರ್ಮೂಲನೆ ಕುರಿತು ಎಲ್‍ಇಡಿ ಪರದೆ ಮೂಲಕ ಮಾಹಿತಿ ನೀಡುವ ಮಾಹಿತಿ-ಶಿಕ್ಷಣ-ಸಂವಹನ ಪ್ರಚಾರ ವಾಹನಕ್ಕೆ ಇಂದು ಜಿಲ್ಲಾಧಿಕಾರಿಗಳ ಭವನದ ಎದುರು ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.


      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಈ ವೇಳೆ ಮಾಹಿತಿ ನೀಡಿ, 2025 ರೊಳಗೆ ಇಡೀ ದೇಶವನ್ನು ಕ್ಷಯಮುಕ್ತವೆಂದು ಘೋಷಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ಮತ್ತು ಜಿಲ್ಲಾದ್ಯಂತ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಕಾರ್ಯಕ್ರಮದಡಿ, ಕ್ಷಯ ರೋಗ ಕುರಿತು ಮಾಹಿತಿ, ಶಿಕ್ಷಣ, ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
    ಈ ಕಾರ್ಯಕ್ರಮದಡಿ ಕ್ಷಯರೋಗ ಮುಕ್ತ ಗ್ರಾ.ಪಂ ಯನ್ನಾಗಿ ಘೋಷಿಸುವ ಸಲುವಾಗಿ ನಮ್ಮ ಜಿಲ್ಲೆಯಲ್ಲಿ 19 ಗ್ರಾ.ಪಂ ಗಳನ್ನು ಆಯ್ಕೆ ಮಾಡಿ ಈಗಾಗಲೇ ಟಾಸ್ಕ್‍ಫೋರ್ಸ್ ಸಮಿತಿ ರಚಿಸಲಾಗಿದೆ. ಹಾಗೂ ಗ್ರಾ.ಪಂ ಪಿಡಿಓ, ಗ್ರಾ.ಪಂ ಸದಸ್ಯರು ಹಾಗೂ ಇತರೆ ಸಿಬ್ಬಂದಿಗಳಿಗೆ ಕ್ಷಯರೋಗ ನಿರ್ಮೂಲನೆ ಕುರಿತು ತರಬೇತಿ ನೀಡಲಾಗಿದೆ.
     ದೇಶದಲ್ಲಿ ಕ್ಷಯ ರೋಗದ ಕುರಿತು ಮಾಹಿತಿ-ಶಿಕ್ಷಣ ಹಾಗೂ ಕ್ಷಯ ರೋಗ ಸಂಖ್ಯೆಯನ್ನು ತಗ್ಗಿಸಿರುವ 56 ಜಿಲ್ಲೆಗಳ ಪೈಕಿ ನಮ್ಮ ಜಿಲ್ಲೆಯೂ ಸೇರಿದ್ದು, ಉತ್ತಮ ಕಾರ್ಯನಿರ್ವಹಣೆ ಮತ್ತು ಕ್ಷಯರೋಗ ಸಂಖ್ಯೆಯನ್ನು ತಗ್ಗಿಸಿರುವುದನ್ನು ಕೇಂದ್ರ ಸರ್ಕಾರ ಗುರುತಿಸಿ ಕಂಚಿನ ಪದಕವನ್ನು ನೀಡಿದೆ ಎಂದು ತಿಳಿಸಿದರು.
     ಕ್ಷಯರೋಗ ನಿರ್ಮೂಲನೆ ಕುರಿತು ಮಾಹಿತಿ-ಶಿಕ್ಷಣ-ಸಂವಹನ ನೀಡುವ ಈ ಪ್ರಚಾರದ ವಾಹನವು ಶಿವಮೊಗ್ಗ ಜಿಲ್ಲೆಯ 12 ಕಡೆಗಳಲ್ಲಿ ಪ್ರಚಾರ ಕೈಗೊಳ್ಳಲಿದೆ. ಪ್ರತಿ ಕಡೆಗಳಲ್ಲಿ 3 ಗಂಟೆಗಳ ಕಾಲ ಕ್ಷಯ ರೋಗದ ಲಕ್ಷಣಗಳು, ಚಿಕಿತ್ಸೆ ಕ್ರಮ ಇತ್ಯಾದಿ ಕುರಿತು ಮಾಹಿತಿಯನ್ನು ಬಿತ್ತರಗೊಳಿಸುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಇದರ ಸದುಪಯೋಗ  ಪಡೆದುಕೊಳ್ಳಬೇಕೆಂದರು.
      ಈ ವೇಳೆ ಆರ್‍ಸಿಹೆಚ್‍ಓ ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ದಿನೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಡಾ.ಮಂಜುನಾಥ ನಾಗಲೀಕರ್, ಜಿಲ್ಲಾ ಹಿರಿಯ ಬಿಆರ್‍ಟಿಬಿ/ಟಿಬಿ ಹೆಚ್‍ಐವಿ ಮೇಲ್ವಿಚಾರಕ ಕುಮಾರ್.ಎಸ್ ಸೇರಿದಂತೆ ಸಿಬ್ಬಂದಿಗಳು ಹಾಜರಿದ್ದರು.

error: Content is protected !!