ಶಿವಮೊಗ್ಗ. ಮೇ 31 : ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕಾರಣಕ್ಕಾಗಿ ಭದ್ರಾವತಿ ತಾಲೂಕನ್ನು ‘ಕೋಟ್ಪಾ ಕಾಯಿದೆ ಉತ್ತಮ ಅನುಷ್ಠಾನ ತಾಲೂಕು’ ಎಂದು ಗುರುತಿಸಿ ಪ್ರಮಾಣಪತ್ರ ನೀಡಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಈ ಘೋಷಣೆಯನ್ನು ಇಲಾಖೆಗಳ ಮಾರ್ಗಸೂಚಿಗಳನ್ವಯ ಘೋಷಿಸಲಾಗಿದೆ. ಆದರೆ, ಭದ್ರಾವತಿ ತಾಲೂಕು ಸಂಪೂರ್ಣವಾಗಿ ತಂಬಾಕು ಮುಕ್ತವಾಗಿದೆ ಎಂದರ್ಥವಲ್ಲ ಎಂದು ತಿಳಿಸಿದ ಅವರು, ಭದ್ರಾವತಿ ತಾಲೂಕಿನಲ್ಲಿ ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಹಯೋಗದೊಂದಿಗೆ ಕೋಟ್ಪಾ ಕಾಯ್ದೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ತಾಲೂಕು ಮಟ್ಟದಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಯ್ದೆಯ ಅನುಸರಣೆಯನ್ನು ಮಾಡಲು ಅನೇಕ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು ಎಂದವರು ನುಡಿದರು.
ಭದ್ರಾವತಿ ತಾಲೂಕಿನಾದ್ಯಂತ 10ದಿನಗಳಿಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ ಕೋಟ್ಪಾ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದಂತೆ 361ಪ್ರಕರಣಗಳನ್ನು ದಾಖಲಿಸಿ ರೂ.21,700/-ಗಳ ದಂಡ ವಿಧಿಸಲಾಗಿದೆ. ಜಿಲ್ಲೆಯಲ್ಲಿ 2016ರಿಂದ ಇಂದಿನವರೆಗೆ 4968ಪ್ರಕರಣಗಳನ್ನು ಪತ್ತೆ ಹಚ್ಚಿ 2,24,895ರೂ. ದಂಡ ವಸೂಲು ಮಾಡಲಾಗಿದೆ ಎಂದ ಅವರು ಜಾಹಿರಾತು ಫಲಕಗಳನ್ನು ಅಳವಡಿಸುವ ಮೂಲಕ ಮತ್ತು ತಂಬಾಕು ಉತ್ಪನ್ನಗಳ ಜಾಹಿರಾತು ಫಲಕಗಳನ್ನು ತೆರವುಗೊಳಿಸುವ ಮೂಲಕ ಕಾನೂನು ಪಾಲನೆ ಮಾಡಲಾಗಿದೆ ಎಂದವರು ನುಡಿದರು.
ಪ್ರಸ್ತುತ ಸಂದರ್ಭದಲ್ಲಿ ನೀಡಲಾಗುತ್ತಿರುವ ಪ್ರಶಂಸಾಪತ್ರವು ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಪ್ರೇರಣೆಯಾಗಲಿದೆ ಎಂದ ಅವರು, ಕೋಟ್ಪಾ ಕಾಯ್ದೆಯ ಯಶಸ್ವಿ ಅನುಷ್ಠಾನದಿಂದಾಗಿ ಮಕ್ಕಳು, ಯುವಕರು ಹಾಗೂ ಧೂಮ್ರಪಾನ ಮಾಡದವರ ಸ್ವಾಸ್ಥ್ಯ ಕಾಪಾಡಲು ಸಾಧ್ಯವಾಗಿದೆ. ಇದರ ವ್ಯವಸ್ಥಿತ ಅನುಷ್ಠಾನಕ್ಕಾಗಿ ಸಾರ್ವಜನಿಕರು, ವರ್ತಕರು ಸೇರಿದಂತೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದವರು ನುಡಿದರು.
ಈ ಸಂದರ್ಭಧಲ್ಲಿ ಉಪಸ್ಥಿತರಿದ್ದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ||ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಅಂದುಕೊಂಡಷ್ಟು ಸುಲಭ ಸಾಧ್ಯವಲ್ಲದಿದ್ದರೂ 2021ರ ಹೊತ್ತಿಗೆ ತಂಬಾಕು ಉತ್ಪನ್ನಗಳ ಬಳಕೆಯಲ್ಲಿ ಕನಿಷ್ಟ ಶೇ.5ರಷ್ಟಾದರೂ ನಿಯಂತ್ರಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಾಯ್ದೆಯ ಉಲ್ಲಂಘನೆ ಮಾಡುವವರನ್ನು ನಿಯಂತ್ರಿಸಿ ದಂಡನೆಗೆ ಗುರಿಪಡಿಸಲು ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ ಶಾಲೆಗಳಲ್ಲಿಯೂ ತಂಬಾಕು ನಿಯಂತ್ರಣ ಸಮಿತಿಯನ್ನು ರಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಶಂಕರಪ್ಪ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.