ಆ. 8 ರಿಂದ ವಿಮಾನ ಹಾರಾಟ ಆರಂಭ : ಸಂಸದ ಬಿವೈಆರ್
ಶಿವಮೊಗ್ಗ : ಮುಂಬರುವ ಆಗಸ್‌್ಟ 8 ರಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಸರಕಾರಿ ನೌಕರರ ಭವನದಲ್ಲಿ ಗುರುವಾರ ಬೆಳಗ್ಗೆ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ವರ್ತಕರ ಸಭೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ರೈಲ್ವೆ ಕ್ಷೇತ್ರದಲ್ಲೂ ಕೂಡ ಮಹತ್ತರ ಬದಲಾವಣೆಯಾಗಿವೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರಿಗೆ ನೂತನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ.10 ಜಿಲ್ಲೆಗಳಿಗೆ ಇದು ಸಂಪರ್ಕ ಕಲ್ಪಿಸಲಿದೆ. ಇದರಿಂದಾಗಿ ಶಿವಮೊಗ್ಗ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ, ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಲಾಭ ಆಗಲಿದೆ.ಶಿವಮೊಗ್ಗದಿಂದ ಹಲವಾರು ಜನರು ದೆಹಲಿಗೆ ಸಂಚರಿಸುತ್ತಾರೆ. ಪ್ರವಾಸೋದ್ಯಮ, ಕೈಗಾರಿಕಾ ವಲಯ ಅಭಿವೃದ್ಧಿಗೆ ಇದು ಪೂರಕವಾಗಿದೆ. ಈಗಾಗಲೇ ನಾವು ಇಂಡಿಗೋ ಸಂಸ್ಥೆಗೆ ಸಬ್‌ಸಿಡಿ ನೀಡಿದ್ದೆವೆ. ಪ್ರವಾಸೋದ್ಯಮದಲ್ಲಿ ಜೋಗ ಅಭಿವೃದ್ಧಿ ಆಗುತ್ತಿದೆ. ಜೋಗ ಅಭಿವೃದ್ಧಿಯಾದರೆ, ಉದ್ಯೋಗ ಸೇರಿದಂತೆ ವಿವಿಧ ಆಯಾಮಗಳಲ್ಲಿ ಶಿವಮೊಗ್ಗ ಜನತೆಗೆ ಲಾಭವಾಗಲಿದೆ. ರಾಜಕಾರಣಕ್ಕಾಗಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಹಿಂಪಡೆಯಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಪಶು ಸಂಗೋಪನೆ ಇಲಾಖೆ ಸಚಿವರು ಹೇಳಿದ್ದಾರೆ. ಗೋವನ್ನು ತಾಯಿಯ ಹಾಗೆ ನಾವು ಪೂಜಿಸುತ್ತೆವೆ. ಈ ಕಾಯ್ದೆ ಹಿಂಪಡೆಯುವುದು ಎಷ್ಟು ಸರಿ ಪ್ರಶ್ನಿಸಿದರು.
ವಿಐಎಸ್‌ಎಲ್ ಪುನಶ್ಚೇತನ ವಿಚಾರವಾಗಿ ಸಂಬಂಧಪಟ್ಟ ಸಚಿವರ ಬಳಿ ಚರ್ಚೆ ನಡೆಸಿದ್ದೆನೆ ಎಂದ ಅವರು, ನೂತನ ಹೆದ್ದಾರಿ ರಸ್ತೆ ನಿರ್ಮಾಣದ ಬಗ್ಗೆಯೂ ಸಚಿವರಾದ ನಿತಿನ್ ಗಡ್ಕರಿಯವರ ಬಳಿ ಚರ್ಚೆ ನಡೆಸಲಾಗಿದೆ ಎಂದರು.
ಶರಾವತಿ ಹಿನ್ನೀರಿನಲ್ಲಿ ನಾವು ನೀರು ಕಡಿಮೆ ಮಾಡಿದ್ದೇವೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ ಮಾಡಿದ್ದಾರೆ. ಆ ಪುಣ್ಯಾತ್ಮ ಅದ್ಯಾಕೆ ಆ ರೀತಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಸೇತುವೆ ನಿರ್ಮಾಣ ಮಾಡಲು, ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ನಮಗೆ ನೀರು ಬೇಕು. ನೀರು ನಾವು ಕಡಿಮೆ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದರು.
ಬರುವ ಡಿಸೆಂಬರ್ ಒಳಗೆ ಹಂತ ಹಂತವಾಗಿ ಈ ಎಲ್ಲಾ ಮೇಲ್‌ಸೇತುವೆ ಕಾಮಗಾರಿ ಉದ್ಘಾಟಿಸಲಾಗುವುದು. ಈಗಾಗಲೇ ಈ ಬಗ್ಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರ ಜೊತೆ ಚರ್ಚಿಸಲಾಗಿದೆ. ವಿಕಾಸ ಸಂಕಲ್ಪ ಯೋಜನೆ ವೀಕ್ಷಣೆ ಮಾಡಲಾಗುತ್ತಿದೆ.
ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಪ್ರಧಾನಮಂತ್ರಿಗಳ ವಿಕಾಸ ಸಂಕಲ್ಪ ಯೋಜನೆ ಫಲಪ್ರದವಾಗಿದೆ ಎಂದು ಹೇಳಿದರು.
ಆರ್ಥಿಕ ತಜ್ಞ ವಿಶ್ವಾನಾಥ್ ಭಟ್ ಅವರು ಮಾತನಾಡಿ, ದೇಶವು ಅಭಿವೃದ್ಧಿ ಹೊಂದಿದಾಗ ಎಲ್ಲರಿಂದಲೂ ಸಾಧನೆ ಸಾಧ್ಯ, ಆದರೆ ಆರ್ಥಿಕ ಹಿಂಜರಿತ ಬಂದಾಗ ಎಲ್ಲವೂ ಹಿನ್ನಡೆ ಆಗುತ್ತದೆ. ಭಾರತದ ವರ್ತಕರ ಭವಿಷ್ಯ ನಮ್ಮ ದೇಶದ ಅಭಿವೃದ್ಧಿಯೊಂದಿಗೆ ಸಂಪೂರ್ಣವಾಗಿ ಬೆಸೆದುಕೊಂಡಿದೆ. ಎಲ್ಲಿಯರೆಗೂ ಅಭಿವೃದ್ಧಿ ಏರುತಿಯಲ್ಲಿರುತ್ತೋ ಅಲ್ಲಿಯವರೆಗೂ ವರ್ತಕರು ಸುಭಿಕ್ಷವಾಗಿರುತ್ತಾರೆ ಎಂದು ಹೇಳಿದರು.
ಭಾರತದ ವರ್ತಕರ ಸಮುದಾಯದ ಬಗ್ಗೆ ಹೆಮ್ಮೆ ಇದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಪ್ರಗತಿಗೆ ಪೂರಕವಾಗಿದ್ದರೆ, ಕಾಂಗ್ರೆಸ್ ಸರಕಾರ ಹಾಗಿಲ್ಲ. ಎಲ್ಲವೂ ಓಟ್ ಬ್ಯಾಂಕ್ ಆಧಾರಿತವಾಗಿವೆ. ಮೋದಿ ಅವರ ಸರಕಾರ ಬಂದ ಬಳಿಕ ಮೇಳೆ ವಿಶ್ವ ಬ್ಯಾಂಕ್ ಹೇಳಿದೆ, ಭಾರತವು ಕಡುಬಡತನವನ್ನು ಕಡಿಮೆ ಮಾಡಿದೆ, ಇದು ಹೆಮ್ಮೆಯ ವಿಷಯ ಎಂದರು.
ಸಭೆಯಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬಿಜೆಪಿ ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಆರ್ಥಿಕ ತಜ್ಞ ವಿಶ್ವಾನಾಥ್ ಭಟ್, ಜಿಲ್ಲಾ ಬಿಜೆಪಿ ಮುಖಂಡ ಡಾ. ಧನಂಜಯ ಸರ್ಜಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.