ಶಿವಮೊಗ್ಗ : ಜೂನ್ 11 : ಕೆರೆ ಕಟ್ಟೆಗಳು ಜನರ ಜೀವನಾಡಿಯಾಗಿದ್ದು, ಗ್ರಾಮೀಣರು ಅವುಗಳನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಂಡಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಅಲ್ಲದೇ ಎಲ್ಲ ಕಾಲದಲ್ಲೂ ನೀರು ಬಳಕೆಗೆ ದೊರೆಯಲಿದೆ ಎಂದು ರಾಜ್ಯ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಅವರು ಹೇಳಿದರು.
ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ತಾಲೂಕು ಪಂಚಾಯತ್ ಶಿವಮೊಗ್ಗ ಹಾಗೂ ಗ್ರಾಮ ಪಂಚಾಯತ್ ಆಯನೂರು ಮತ್ತು ಕೋಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಮಾಸಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಆರೋಗ್ಯ ರಕ್ಷಣೆ, ಜಲ ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಾಯಕವಾಗಿದೆ ಎಂದವರು ನುಡಿದರು.
ಗ್ರಾಮೀಣ ಪರಿಸರದ ಕುರಿತು ಜನರಲ್ಲಿ ಅರಿವು ಮೂಡಿಸುವಲ್ಲಿ ಈ ಕಾರ್ಯಕ್ರಮ ಸಹಾಯಕವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಜನರಲ್ಲಿ ನೀರಿನ ಮಹತ್ವದ ಬಗ್ಗೆ ಯಾವುದೇ ಅರಿವಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಹಾಗೂ ಸದ್ಭಳಕೆ ಕುರಿತು ಯುದ್ಧಗಳೇ ನಡೆದರೆ ಆಶ್ಚರ್ಯವಿಲ್ಲ ಎಂದವರು ನುಡಿದರು.
ನೂರಾರು ಅಡಿ ಕೊಳವೆಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಇದರ ಕಾರಣಗಳ ಬಗ್ಗೆ ಗಮನಹರಿಸುವುದು ಇಂದಿನ ತುರ್ತು ಅನಿವಾರ್ಯವಾಗಿದೆ. ಭೂಮಿಯ ಒಡಲು ಬರಿದಾಗುತ್ತಿದೆ. ಕಾಲಕಾಲಕ್ಕೆ ಮಳೆ ಬರುತ್ತಿಲ್ಲ. ನಗರೀಕರಣದಿಂದಾಗಿ ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಇವೆಲ್ಲವನ್ನು ಗಮನದಲ್ಲಿರಿಸಿಕೊಂಡು ಪರಿಸರವನ್ನು ಉಳಿಸಿಕೊಂಡು ಮುಂದಿನ ತಲೆಮಾರಿನ ಪೀಳಿಗೆಗೆ ಉಳಿಸಿಕೊಳ್ಳುವ ಅಗತ್ಯವಿದೆ ಎಂದವರು ನುಡಿದರು.
ಬಾಹ್ಯ ಹಾಗೂ ಆಂತರಿಕ ಸ್ಚಚ್ಚತೆಗೆ ಗಮನಹರಿಸಬೇಕು. ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದನ್ನೇ ಮರೆತಿದ್ದೇವೆ. ಸರಳವಾಗಿ ದೊರೆಯಬಹುದಾದ ನೀರನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಅಗತ್ಯಕ್ಕೆ ತಕ್ಕಷ್ಟು ನೀರನ್ನು ಹಾಗೂ ವಿದ್ಯುತ್ನ್ನು ಮಿತವಾಗಿ ಬಳಸಿದರೂ ಕೂಡ ಒಂದು ರೀತಿಯ ದೇಶಸೇವೆಯೆ ಆಗಿದೆ ಎಂದ ಅವರು, ಪರಿಸರದ ಮೇಲಿನ ಮನುಷ್ಯನ ಅವ್ಯಾಹತ ದಾಳಿಯಿಂದಾಗಿ ಪರಿಸರದ ಅಸಮತೋಲನಕ್ಕೆ ಕಾರಣವಾಗಿದೆ. ನಮ್ಮ ಭವಿಷ್ಯದ ನೆಮ್ಮದಿಯ ಬದುಕಿಗಾಗಿ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಸಾಂಸದ ಬಿ.ವೈ.ರಾಘವೇಂದ್ರ ಅವರು ಬಿತ್ತಿಫಲಕ ಅನಾವರಣಗೊಳಿಸಿದರು. ಶಾಸಕ ಕೆ.ಬಿ.ಅಶೋಕನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ಶ್ರೀಮತಿ ವೇದಾ ವಿಜಯ್ ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಜಿಲ್ಲಾ ಪಂಚಾಯಿತ್ ಸದಸ್ಯ ತಮ್ಮಡಿಹಳ್ಳಿ ನಾಗರಾಜ್, ಶ್ರೀಮತಿ ಶಕುಂತಲಮ್ಮ, ಶ್ರೀಮತಿ ಸೌಮ್ಯ, ಶ್ರೀಮತಿ ಸುಧಾ, ಪ್ರಭಾಕರ್ ಎನ್., ಶ್ರೀಮತಿ ನಾಗರತ್ನಮ್ಮ, ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಶಿವರಾಮೇಗೌಡ, ಡಾ|| ಎಸ್.ರಂಗಸ್ವಾಮಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.