ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪರಿಸರ ಸ್ನೇಹಿ ಸುಸ್ಥಿರ ಮಾದರಿ ಅಗತ್ಯ: ಸ್ನೇಹಲ್ ಸುಧಾಕರ್ ಲೋಖಂಡೆ
ಶಂಕರಘಟ್ಟ, ಸೆ. 27: ಶಿವಮೊಗ್ಗ ಜಿಲ್ಲೆಯಾದ್ಯಂತ ಜಾಗತಿಕ ಮತ್ತು ಆಂತರಿಕ ಪ್ರವಾಸಿಗರನ್ನು ಸೆಳೆಯಬಲ್ಲ ಅದ್ಬುತವಾದ ಪ್ರವಾಸಿ ತಾಣಗಳಿದ್ದು, ಇವುಗಳನ್ನು ಸುಸ್ಥಿರ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಸ್ನೇಹಲ್ ಸುಧಾಕರ್ ಲೋಖಂಡೆ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಅಧ್ಯಯನ ವಿಭಾಗ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಜಂಟಿ ಸಹಯೋಗದಲ್ಲಿ ಬುಧವಾರ ವಿವಿ ಆವರಣದ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರತಕ್ಕೆ ವಿಫುಲವಾದ ಅವಕಾಶಗಳಿವೆ. ಸ್ಥಳೀಯ ಮಟ್ಟದಲ್ಲಿ ಅಡಗಿರುವ ಹಲವಾರು ಅದ್ಭುತ ಪ್ರವಾಸಿ ತಾಣಗಳಿಗೆ ಜಾಗತಿಕ ಮಟ್ಟದ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ, ಇವುಗಳನ್ನು ಪರಿಸರ ಸ್ನೇಹಿಯನ್ನಾಗಿಸಬೇಕಿದೆ. ಇಂಥಹಾ ಪ್ರವಾಸಿ ತಾಣಗಳಿಗೆ ವ್ಯಾಪಕ ಪ್ರಚಾರದ ಅಗತ್ಯತೆ ಕೂಡ ಇದೆ ಎಂದರು.
ಕುಲಪತಿ ಪ್ರೊ.ಎಸ್. ವೆಂಕಟೇಶ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವ್ಯಾಪಕವಾದ ಉದ್ಯೋಗಾವಕಾಶಗಳಿವೆ. ಜಿಲ್ಲಾಡಳಿತ, ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಬಳಸಿಕೊಂಡು ಉದ್ಯೋಗ ಸೃಷ್ಟಿಸುವುದರತ್ತ ಗಮನಹರಿಸಬೇಕಿದೆ ಎಂದು ಸಲಹೆಯಿತ್ತರು.
ಪ್ರವಾಸೋದ್ಯಮ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಎಚ್. ಎನ್. ರಮೇಶ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಧರ್ಮಪ್ಪ, ಡಾ. ಕೆ. ಆರ್.ಮಂಜುನಾಥ್, ಇಲಾಖೆಯ ಅಮಿತ್ ಮತ್ತು ಸಿಬ್ಬಂದಿ, ಪಿಇಎಸ್ ಕಾಲೇಜು, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಕುವೆಂಪು ವಿವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.