ಕುವೆಂಪು ವಿವಿ: ಪ್ರೊ. ಬಿ. ತಿಪ್ಪೇಸ್ವಾಮಿಗೆ ರಾಷ್ಟ್ರಮಟ್ಟದ ಪೇಟೆಂಟ್!
ಕೃಷಿ ಅನ್ವಯಿಕತೆಯಲ್ಲಿ ನ್ಯಾನೋ ಬಯೋ ಜಿ಼ಂಕ್ ಸಂರಚನೆ ಕುರಿತ ಆವಿಷ್ಕಾರಕ್ಕೆ ಪೇಟೆಂಟ್!
ಶಂಕರಘಟ್ಟ, ಏ. 08: ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತೊಂದು ರಾಷ್ಟ್ರಮಟ್ಟದ ಮನ್ನಣೆ ದೊರಕಿದ್ದು, ಸೂಕ್ಷ್ಮಜೀವಿ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಅಧ್ಯಕ್ಷ ಪ್ರೊ. ಬಿ. ತಿಪ್ಪೇಸ್ವಾಮಿ ಅವರ “ಕೃಷಿ ಅನ್ವಯಿಕತೆಯಲ್ಲಿ ನ್ಯಾನೋ ಬಯೋ ಜಿ಼ಂಕ್ ಸಂರಚನೆ” ಎಂಬ ಸಂಶೋಧನಾ ಆವಿಷ್ಕಾರಕ್ಕೆ ಭಾರತ ಸರ್ಕಾರದ ಅಧಿಕೃತ ಪೇಟೆಂಟ್ ಇಲಾಖೆಯು ಪೇಟೆಂಟ್ ನೀಡಿದೆ.
ಸಂಶೋಧಕರಾದ ಪ್ರೊ. ಬಿ ತಿಪ್ಪೇಸ್ವಾಮಿ ಮತ್ತು ಅಮಿತಾ ಗಣಪತಿ ಬಿ ಒಟ್ಟುಗೂಡಿ ನ್ಯಾನೋ ಬಯೋ ಜಿಂಕ್ ರಾಸಾಯನಿಕದ ಸಂರಚನೆಯನ್ನು ಕೃಷಿಯ ವಿವಿಧ ಉತ್ಪನ್ನಗಳಲ್ಲಿ ಅನ್ವಯಿಸುವ ಸಾಧ್ಯತೆಗಳ ಕುರಿತು ಸಂಶೋಧನೆ ನಡೆಸಿದ್ದರು. ಇದಕ್ಕಾಗಿ ‘Nano-Bio-Zinc formulation for agriculture applications’ ಎಂಬ ಶೀರ್ಷಿಕೆ ಉಳ್ಳ ಪೇಟೆಂಟ್ ಪ್ರಮಾಣ ಪತ್ರವನ್ನು ಏಪ್ರಿಲ್ 05ರಂದು ನೀಡಲಾಗಿದೆ.
ಟ್ಯೊಮಾಟೊ, ಮತ್ತು ಮೆಣಸಿನ ಕಾಯಿ ಬೆಳೆಗಳಿಗೆ ಉತ್ತಮ ಪೌಷ್ಠಿಕಾಂಶದೊಂದಿಗೆ ಅಧಿಕ ಇಳುವರಿ ದೊರಕಿಸಿಕೊಡುವಲ್ಲಿ ಬಯೋ-ಜಿ಼ಂಕ್ ನ ನ್ಯಾನೋ ಅಂಶಗಳು ಪ್ರಮುಖ ಪಾತ್ರ ವಹಿಸಲಿದೆ ಎಂಬ ಅಂಶ ಪ್ರಾಯೋಗಿಕ ಅಧ್ಯಯನದಿಂದ ದೃಢಪಟ್ಟಿದ್ದು, ಈ ಬೆಳೆಗಳನ್ನು ಅವಲಂಬಿಸಿರುವ ಕೃಷಿಕರಿಗೆ ವಾಣಿಜ್ಯಕವಾಗಿ ಹೆಚ್ಚಿನ ಲಾಭ ಗಳಿಸಿಕೊಡಲಿದೆ. ಇದನ್ನು ಗುರುತಿಸಿ ಭಾರತ ಸರ್ಕಾರ ಪೇಟೆಂಟ್ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಪ್ರೊ. ಬಿ. ತಿಪ್ಪೇಸ್ವಾಮಿ ಅವರ ಈ ಸಾಧನೆ ಕೃಷಿ ಅನ್ವಯಿಕತೆಗೆ ಸಹಕಾರಿಯಾಗಲಿರುವುದು ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ವಿಚಾರ. ಬೋಧನೆ, ಮತ್ತು ಸಂಶೋಧನಾ ವಿಚಾರಗಳಿಗೆ ಸಮಂಧಿಸಿದಂತೆ ಆಡಳಿತಾತ್ಮಕ ತೊಡಕುಗಳನ್ನು ನಿವಾರಿಸಿ ಪ್ರಾಧ್ಯಾಪಕರಿಗೆ ಸಂಪೂರ್ಣ ಉತ್ತೇಜನ ನೀಡಲು ಆದ್ಯತೆ ನೀಡಲಾಗುವುದು ಎಂದರು. ಕುಲಸಚಿವ ಎ. ಎಲ್. ಮಂಜುನಾಥ್ ಸಂಶೋಧಕರನ್ನು ಅಭಿನಂದಿಸಿದರು.