ಶಿವಮೊಗ್ಗ, ಮೇ.20, ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಹಲವೆಡೆ ಉಂಟಾಗಿರುವ ಕುಡಿಯುವ ನೀರಿನ ಅಭಾವವನ್ನು ನೀಗಿಸಲು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಹಾಗೂ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
2023-24 ನೇ ಸಾಲಿನ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಜಿ.ಪಂ ಸಿಇಓ ರವರು ಸುತ್ತೋಲೆ ಹೊರಡಿಸಿರುವನ್ವಯ ಈಗಾಗಲೇ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ತಹಶೀಲ್ದಾರರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನೊಳಗೊಂಡ ಟಾಸ್ಕ್‍ಫೋರ್ಸ್ ಸಮಿತಿಯಲ್ಲಿ ಕುಡಿಯುವ ನೀರಿನ ಅಭಾವವಿರುವ ಗ್ರಾಮಗಳ ಪಟ್ಟಿಯನ್ನು ತಯಾರಿಸಿಕೊಂಡು, ಅಭಾವ ನೀಗಿಸಲು ಗ್ರಾಮ ಪಂಚಾಯ್ತಿಗಳಲ್ಲಿ ಲಭ್ಯವಿರುವ 15 ಹಾಗೂ 14 ನೇ ಹಣಕಾಸು ಆಯೋಗದ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಂಡು ಕ್ರಮ ವಹಿಸಿದ್ದಾರೆ.
ಕುಡಿಯುವ ನೀರನ್ನು ಪೂರೈಸುವುದು ಗ್ರಾ.ಪಂ ಯ ಆದ್ಯ ಕರ್ತವ್ಯವಾಗಿದ್ದು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಟಾಸ್ಕ್‍ರ್ಫೋ ಸಮಿತಿಯಿಂದ ಶಿಫಾರಸು ಮಾಡಲ್ಪಟ್ಟಿರುವ ಕ್ರಿಯಾಯೋಜನೆಯಲ್ಲಿ ತುರ್ತು ಕುಡಿಯುವ ನೀರಿನ ಸರಬರಾಜಿಗಾಗಿ ಅತೀ ಅವಶ್ಯಕ ಕಾಮಗಾರಿಗಳನ್ನು ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗಿದೆ ಹಾಗೂ ಕುಡಿಯುವ ನೀರಿನ ತೀವ್ರ ಅಭಾವವಿರುವ ಕೆಲವೆಡೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ್ನು ಪೂರೈಸಲಾಗುತ್ತಿದೆ.
ಹಾಲಿ ಇರುವ ಕೊಳವೆ ಬಾವಿಗಳನ್ನು ಇನ್ನೂ ಆಳಪಡಿಸುವುದು ಪ್ರಥಮ ಆದ್ಯತೆಯಾಗಿ ಪರಿಗಣಿಸಿ, ತೀವ್ರ ಅವಶ್ಯಕತೆ ಉಂಟಾದ ಆಯಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಪರಿಶೀಲಿಸಿ, ಷರತ್ತು ನಿಬಂಧನೆಗಳ ಪಾಲನೆಯೊಂದಿಗೆ 14 ಮತ್ತು 15 ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಒಟ್ಟು 92 ಬೋರ್ ಕೊರೆಸಲಾಗಿದ್ದು 63 ಯಶಸ್ವಿಯಾಗಿದೆ ಹಾಗೂ 109 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಶಿವಮೊಗ್ಗ ತಾಲ್ಲೂಕಿನಲ್ಲಿ 8 ಕೊಳವೆ ಬಾವಿ ಕೊರೆಸಲಾಗಿದ್ದು 5 ಯಶಸ್ವಿಯಾಗಿವೆ. ತಾಲ್ಲೂಕಿನ 4 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಭದ್ರಾವತಿ ತಾಲ್ಲೂಕಿನಲ್ಲಿ 2 ಬೋರ್ ತೆಗೆಸಲಾಗಿದ್ದು 1 ಯಶಸ್ವಿಯಾಗಿದೆ. 8 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
ಸೊರಬ ತಾಲ್ಲೂಕಿನಲ್ಲಿ 10 ಬೋರ್ ಕೊರೆಸಲಾಗಿದ್ದು 8 ಯಶಸ್ವಿಯಾಗಿವೆ. 5 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
ತೀರ್ಥಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ 30 ಬೋರ್ ಕೊರೆಸಿದ್ದು 22 ಯಶಸ್ವಿಗಾಗಿದ್ದು 12 ಗಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ.
ಹೊಸನಗರ ತಾಲ್ಲೂಕಿನ 5 ಬೋರ್ ಕೊರೆಸಲಾಗಿದ್ದು 3 ಯಶಸ್ವಿಯಾಗಿದೆ. 40 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.
ಸಾಗರ ತಾಲ್ಲೂಕಿನಲ್ಲಿ 7 ರಲ್ಲಿ 3 ಬೋರ್ ಯಶಸ್ವಿಯಾಗಿದ್ದು 35 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ಹಾಗೂ ಶಿಕಾರಿಪುರ ತಾಲ್ಲೂಕಿನಲ್ಲಿ 30 ಬೋರ್ ಕೊರೆಸಿದ್ದು 21 ಯಶಸ್ವಿಯಾಗಿದೆ. 5 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ.