ಶಿವಮೊಗ್ಗ. ಜೂನ್ 07 : ಮಳೆ ಅಭಾವದಿಂದಾಗಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗಾಜನೂರು ಆಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಕುಡಿಯುವ ನೀರಿನ ಸಂಗ್ರಹಣೆ 0.25 ಟಿಎಂಸಿ ಆಗಿದ್ದು, ಪ್ರಸ್ತುತ ನಗರದ ಕುಡಿಯುವ ನೀರಿನ ಅವಶ್ಯಕತೆ 0.2 ಟಿ.ಎಂ.ಸಿ. ಇರುವುದರಿಂದ ಮಳೆಗಾಲ ಪ್ರಾರಂಭವಾಗುವವರೆಗೂ ದಿನ ಬಿಟ್ಟು ದಿನ ನೀರು ಸರಬರಾಜು ಮಾಡುವ ಪರಿಸ್ಥಿತಿ ಒದಗಿದೆ ಎಂದು ಮಹಾನಗರ ಪಾಲಿಕೆ ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ಧಿಗಾರರೊಂದಿಗೆ ಮಾತಾನಾಡಿ ನಗರ ವ್ಯಾಪ್ತಿಯ ಸಾರ್ವಜನಿಕರು ಕುಡಿಯುವ ನೀರನ್ನು ಅಗತ್ಯಕ್ಕೆ ತಕ್ಕಷ್ಟೆ ಮಿತವಾಗಿ ಬಳಸುವುದು. ಸರಬರಾಜಾಗುವ ನೀರಿನ ನಳಕ್ಕೆ ಹಿಂತಿರುಗಿಸುವ ಕವಾಟ (ನಾನ್ ರಿಟರ್ನ್ ವಾಲ್ವ್) ಕಡ್ಡಾಯವಾಗಿ ಅಳವಡಿಸುವುದು, ಕುಡಿಯುವ ನೀರನ್ನು ಗಿಡ ಮರಗಳಿಗೆ ಬಳಸದೇ, ಪಾತ್ರೆ, ಬಟ್ಟೆ, ನೆಲ ಸ್ವಚ್ಚಗೊಳಿಸಿದ ನೀರನ್ನು ಶೇಖರಿಸಿ ಬಳಸುವುದು. ಸಂಪ್ನಿಂದ ಓವರ್ಟ್ಯಾಂಕ್ಗೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಮೇಲೆತ್ತಲು ಕ್ರಮ ಕೈಗೊಳ್ಳುವುದು. ಸಿಂಟೆಕ್ಸ್ ತುಂಬಿ ಹರಿಯದಂತೆ ಜಾಗ್ರತೆವಹಿಸುವಂತೆ ಸೂಚಿಸಿದರು.
ಸಂಪ್ಗಳಿಲ್ಲದ ಮನೆಗಳಿಗೆ ಹಾಗೂ ಆಸ್ಪತ್ರೆಗಳಿಗೆ ದಿನನಿತ್ಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಟ್ಯಾಂಕರ್ಗಳ ಮೂಲಕ ಅಥವಾ ನಲ್ಲಿಗಳ ಮೂಲಕ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ದಿನನಿತ್ಯದ ನೀರಿನ ಬೇಡಿಕೆಗಳಿಗೆ ಸಮೀಪದಲ್ಲಿರುವ ನೀರಿನ ಮೂಲಗಳಾದ ಬೋರ್ವೆಲ್, ತೆರೆದ ಬಾವಿ, ಚಾನಲ್ ಇತ್ಯಾದಿಗಳನ್ನು ಬಳಕೆ ಮಾಡಿ ಕುಡಿಯುವ ನೀರನ್ನು ಮಿತವಾಗಿ ಬಳಸುವುದು. ವಾಹನ, ರಸ್ತೆ ಹಾಗೂ ಮನೆಯ ಮುಂದಿನ ಅಂಗಳಗಳನ್ನು ಕುಡಿಯುವ ನೀರಿನಿಂದ ತೊಳೆಯದೇ ಅಗತ್ಯಕ್ಕೆ ತಕ್ಕಂತೆ ಬಳಕೆಯಾದ ನೀರನ್ನು ಉಪಯೋಗಿಸುವುದು.
ವಿತರಣಾ ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಕಂಡುಬಂದಲ್ಲಿ ಜಲಮಂಡಳಿ ನಿರ್ವಹಣಾ ಉಪವಿಭಾಗದ ದೂ.ಸಂ.: 08182-273096 ಕರೆ ಮಾಡಿ ಗಮನಕ್ಕೆ ತರುವಂತೆ ಮಹಾನಗರ ಪಾಲಿಕೆ ಮಹಾಪೌರರು ಹಾಗೂ ಆಯುಕ್ತರು ಸಾರ್ವಜನಿಕರಿಗೆ ತಿಳಿಸಿರುತ್ತಾರೆ.