ಕೃಷಿಯು ವಿಶ್ವಾದ್ಯಂತ 60% ಯೋಗ್ಯ ಭೂಮಿಯನ್ನು ಈಗಾಗಲೇ ಆಕ್ರಮಿಸಿಕೊಂಡಿದೆ. ಕೃಷಿಯ ಸುಸ್ಥಿರತೆಯು ನಿಸರ್ಗವನ್ನು ಸಂರಕ್ಷಿಸುತ್ತಾ ಆಹಾರ ಉತ್ಪಾದನಾ ಗುರಿಗಳನ್ನು ಪೂರೈಸಲು ಸಹಕಾರಿಯಾಗಿದೆ. ವಿಶ್ವದ ರೈತರಲ್ಲಿ ಸುಮಾರು 2.5 ಶತಕೋಟಿ ರೈತರು ಸಣ್ಣ ಹಿಡುವಳಿದಾರರಾಗಿರುತ್ತಾರೆ. ಸಾಮಾಜಿಕ ಯೋಗಕ್ಷೇಮಕ್ಕೆ ಇವರ ಕೊಡುಗೆ ಅಪಾರವಾಗಿದೆ. ವಿಶ್ವಸಂಸ್ಥೆಯ ಒಂದು ಮುಖ್ಯ ಅಭಿವೃದ್ಧಿ ಗುರಿಗಳಲ್ಲಿ 2030 ರೊಳಗೆ ಬಡತನವನ್ನು ಕೊನೆಗೊಳಿಸುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಖಾಲಿ ಮಾಡದಯೇ ಸುಸ್ಥಿರ ಆಹಾರ ಮತ್ತು ಪೌಷ್ಠಿಕಾಂಶದ ಸುರಕ್ಷತೆಯನ್ನು ಸಾಧಿಸುವುದಾಗಿದೆ. ಆದರೆ ಮಾನವನ ವಿವಿಧ ಚಟುವಟಿಕೆಗಳು ಅಸಾಧಾರಣ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸವಾಲುಗಳನ್ನು ಒಡ್ಡುತ್ತಿವೆ. ವ್ಯಾಪಕ ರಾಸಾಯನಿಕ ಮಾಲಿನ್ಯ, ರೋಗ ಪ್ರತಿರೋಧಕತಾ ಶಕ್ತಿ ವಾಸಸ್ಥಾನ ನಾಶ ಮತ್ತು ಜೀವ ವೈವಿಧ್ಯತೆಯ ನಷ್ಟವು ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ಕೀಟಗಳಿಂದಾಗುವ ಹಾನಿಯು ಮತ್ತಷ್ಟು ಹೆಚ್ಚಾಗುವ ಪ್ರಮುಖ ತೊಂದರೆಗಳಾಗಿವೆ.
ಇಂತಹ ಪ್ರಮುಖ ಕಾರಣಗಳಿಂದಾಗಿ ಕೀಟಗಳ ಜೀವನಚಕ್ರ, ವಂಶಾಭಿವೃದ್ಧಿ ಹರಡುವಿಕೆ, ಪರಿಸರಕ್ಕೆ ಹೊಂದಿಕೊಳ್ಳುವ ರೀತಿ ಮತ್ತು ಇತರ ಅಂಶಗಳಲ್ಲಿ ಬಹಳಷ್ಟು ವ್ಯತ್ಯಾಸಗಳಾಗುವ ಸಾಧ್ಯತೆ ಇದೆ. ಜೈವಿಕ ನಿಯಂತ್ರಣದಂತಹ ಪರಿಸರ ಪೂರಕ ಕೀಟ/ಪೀಡೆ ಹತೋಟಿಕ್ರಮಗಳು ಪ್ರಪಂಚದ ಪರಿಸರ ವ್ಯವಸ್ಥೆಗಳ ತನ್ನಿಂತಾನೆ ಉತ್ತಮ ಕಾರ್ಯನಿರ್ವಹಣೆಗೆ ಮತ್ತು ಆಹಾರ ಉತ್ಪಾದನೆಗೆ ಪ್ರಾಮುಖ್ಯತೆಯನ್ನು ಪಡೆದಿದೆ. ಅವುಗಳ ಆರ್ಥಿಕ ಮೌಲ್ಯ ಮತ್ತು ಸಾಮಾಜಿಕ ಪ್ರಯೋಜನಗಳು ಸಾಬೀತಾಗಿದ್ದರೂ, ರಸಗೊಬ್ಬರ ಅಥವಾ ಕೀಟನಾಶಕಗಳಂತಹ ರಾಸಾಯನಿಕಗಳ ಹೆಚ್ಚಾದ ಬಳಕೆಯಿಂದ ಜೈವಿಕ ಕ್ರಮಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತಿದೆ ಮತ್ತು ಉಪಯೋಗಕ್ಕೆ ಕಡಿವಾಣ ಹಾಕಲಾಗುತ್ತಿದೆ.
ಹೀಗಾಗಲೇ ಮೇಲೆ ತಿಳಿಸಿದಂತೆ ಬೇರೆ ಬೇರೆ ತರಹದ ಕೀಟಗಳು ಈ ಭೂಮಿಯ ಮೇಲಿವೆ. ಅವುಗಳಲ್ಲಿ ಕೆಲವು ಪ್ರಭೇದಗಳನ್ನು key stone species ಅಂದರೆ ಬಹುಮುಖ್ಯ ಪ್ರಭೇದಗಳು ಎಂದು ಗುರುತಿಸಲಾಗಿದೆ. ಒಂದು ಉದಾಹರಣೆ ಕೊಡುತ್ತನೆ. ಸುಮ್ಮನೆ ಒಂದು ಕಲ್ಪನೆ ಮಾಡಿಕೊಳ್ರಿ, ಈ ಸೊಳ್ಳೇನೇ ಭೂಮಿಯ ಮೇಲೆ ಇರದಿದ್ದರೆ ಏನಾಗುತ್ತಿತ್ತು ಎಂದು ಅದೇತರಹ, ನಾವು ಒಂದು ಭತ್ತದ ಗದ್ದೆಗೆ ಹೋದ್ರೇ, ನೂರಾರು ತರಹದ ಕೀಟಗಳನ್ನು ನೋಡಬಹುದು. ಕೆಲವು ನಮ್ಮ ಬೆಳೆಯನ್ನು ತಿನ್ನುತ್ತವೆ, ಮತ್ತು ಕೆಲವು ಕೀಟಗಳು, ಈ ಬೆಳೆನಾಶ ಮಾಡುವ ಕೀಟಗಳನ್ನು ತಿಂದು ಬದುಕುತ್ತವೆ. ಅವುಗಳೆಲ್ಲ ಪ್ರಮುಖವಾದವು ಈ ಮಳೆ ಚಿಟ್ಟೆಗಳು (ನಾವು ಇಂಗ್ಲೀಷ್ನಲ್ಲಿ Drogn fly & Damsel fliesಅಂತ ಕರೀತಿವಿ) ಇವೇನಾದ್ರೊ ಇಲ್ಲ ಅಂದ್ದಿದ್ರೆ, ಬಹುಶ: ನಾವು ಭತ್ತವನ್ನು ಬೆಳೆಯುವುದು ಬಹಳ ಕಷ್ಟ ಆಗುತ್ತದೆ. ಏಕೆಂದರೆ ಈ ಕೀಟಗಳು ಭತ್ತಕ್ಕೆ ಬರುವ ಬಹುತೇಕ ಕೀಟಗಳನ್ನು ಭಕ್ಷಿಸಿ ಬದುಕುತ್ತವೆ. ಇಂತಹ ವಿಷಯಗಳು ಕುಲಂಕುಶವಾದ ಅಧ್ಯಯನದಿಂದ ಮಾತ್ರ ಸಾಧ್ಯ. ಕೀಟಗಳ ಬಗ್ಗೆ ವೈಜ್ಞಾನಿಕವಾಗಿ ಅಭ್ಯಸಿಸುವುದರಿಂದ ಮತ್ತು ಅವುಗಳ ಸಂರಕ್ಷಣೆಯಿಂದ ಮನುಕುಲಕ್ಕೆ ಒಳಿತಾಗುವುದು.
ಈ ಭೂಮಿಯ ಮೇಲೆ ಅಷ್ಟೊಂದು ಕೀಟಗಳಿದ್ದರೂ, ಸುಮಾರು 5 ಸಾವಿರ ಅಥವಾ 10 ಸಾವಿರ ಪ್ರಭೇಧಗಳು ಮಾತ್ರ ನಮ್ಮ ವಿವಿಧ ಬೆಳೆಗಳಿಗೆ ಹಾನಿ ಮಾಡುತ್ತವೆ. ಮತ್ತು ಕೆಲವು ಮಾತ್ರ ಮನುಷ್ಯನಿಗೆ ತೊಂದರೆ ಉಂಟುಮಾಡುತ್ತವೆ. ಉಳಿದೆಲ್ಲವೂ ನಮಗೆ ಕೆಲವೊಮ್ಮೆ ನೇರವಾಗಿ ಮತ್ತು ಪರೋಕ್ಷವಾಗಿ ಉಪಯೋಗ ಮಾಡುತ್ತವೆ. ಕೆಲವು ಕೀಟಗಳ ಗುಣ ಧರ್ಮಗಳನ್ನು ಬೇರೆ ಬೇರೆ ವೈಜ್ಞಾನಿಕವಾಗಿ ಕ್ಷೇತ್ರಗಳಲ್ಲಿ ಬಳಸಿಕೊಳ್ತಾ ಇದ್ದಾರೆ. ಏನೆಂದ್ರೇ ಇಷ್ಟೆ, ನಾವು ಕೀಟಗಳನ್ನು ಎಲ್ಲ ಸಮಯದಲ್ಲೂ ಕೆಟ್ಟ ದೃಷ್ಟಿಯಿಂದ ನೋಡುವುದನ್ನು ಬಿಡಬೇಕೆಂದು ಹೇಳುತ್ತಾ, ಈ ಭೂಮಿಯ ಮೇಲೆ ಕೀಟಗಳಿಗಿಂತ ಪ್ರಬಲ ಜೀವಿಗಳು ಇಲ್ಲ ಮತ್ತು ಅವುಗಳ ವೈಜ್ಞಾನಿಕ ಅರಿವು ಅತ್ಯಗತ್ಯ.
ನಮ್ಮ ಬೆಳೆಗಳಿಗೆ ಬಾಧಿಸುವ ವಿವಿಧ ಕೀಟಗಳನ್ನು ನಾವು ಹತೋಟಿ ಮಾಡಲು ಬಹಳ ಕಷ್ಟ ಪಡುತ್ತೇವೆ ಮತ್ತು ಹೆಚ್ಚು ಹಣವು ಅದಕ್ಕೋಸ್ಕರವೇ ವ್ಯಯವಾಗುತ್ತದೆ.
ಪ್ರತಿ ಜಾತಿಯ ಕೀಟಗಳ ಜೀವನ ಚಕ್ರ ಬೇರೆ ಬೇರೆ ರೀತಿಯಾಗಿರುತ್ತದೆ. ಕೆಲವು ಕೀಟಗಳು ತಮ್ಮ ಜೀವನವನ್ನು 3 ಹಂತಗಳಲ್ಲಿ ಮತ್ತು ಕೆಲವು ಕೀಟಗಳು 4 ಹಂತಗಳಲ್ಲಿ ನಮ್ಮ ಜೀವನ ಚಕ್ರವನ್ನು ಮುಗಿಸುತ್ತವೆ. 3 ಹಂತ ಅಂದರೆ ಮೊಟ್ಟೆ, ಮರಿಹಳು, ಮತ್ತು ಪ್ರೌಢಹುಳು, ಈ ಗುಂಪಿಗೆ ಸೇರಿರುವುಗಳಲ್ಲಿ ಸರ್ವೇ ಸಾಮಾನ್ಯವಾದ ತಿಗಣೆ, ಜಿರಲೆಗಳು, ಸೇರಿವೆ. ಆದರೆ 4 ಹಂತಗಳೆಂದರೆ ಮೊಟ್ಟೆ, ಮರಿಹುಳು, ಕೋಶವಸ್ಥೆ ಮತ್ತು ಪ್ರೌಢ ಹುಳುಗಳು ಇದಕ್ಕೆ ಉದಾಹರಣೆ ಎಂದರೆ ರೇಷ್ಮೆಹುಳು, ಅಥವಾ ಚಿಟ್ಟೆ, ಮತ್ತು ದುಂಬಿಗಳು. ಸೇರಿವೆ ಇದಿಷ್ಟೆ ಅಲ್ಲ, ಅವು ಎಲ್ಲಿ ಮೊಟ್ಟೆ ಇಡುತ್ತವೆ, ಮರಿಗಳು ಏನನ್ನು ತಿಂದು ಜೀವಿಸುತ್ತವೆ, ಯಾವ ಹೊತ್ತಿನಲ್ಲಿ ತಿನ್ನುತ್ತವೆ, ಕೋಶವಸ್ಥೆಗೆ ಎಲ್ಲಿ ಹೋಗುತ್ತವೆ ವರ್ಷದ ಯಾವ ಋತುವಿನಲ್ಲಿ ಕಂಡುಬರುತ್ತವೆ. ಪ್ರೌಢಹುಳುಗಳು ಯಾವ ಸಮಯದಲ್ಲಿ ಹಾರಡುತ್ತವೆ ಇವೆಲ್ಲಾ ವಿಷಯಗಳನ್ನು ರೈತರು ಮನಗಂಡರೆ ಅವುಗಳ ನಿಯಂತ್ರಣ ಕಷ್ಟ ಸಾಧ್ಯವೇನಲ್ಲ ಎಂದು ತಿಳಿಸುತ್ತೇನೆ, ಕಾರಣ ಅವುಗಳ ನಿಯಂತ್ರಣವನ್ನು ಕೀಟಗಳ ಜೀವನ ಚರಿತ್ರೆಯ ಆಧಾರದ ಮೇಲೆಯೇ ವಿಜ್ಞಾನಿಗಳು ರೂಪಿಸುತ್ತಾರೆ.
ಒಂದು ಹುಳುವನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ತೇನೆ ನೀವು ಗೊಣ್ಣೆ ಹುಳುವನ್ನು ನೋಡಿರಬಹುದು ತಿಪ್ಪೆಗಳಲ್ಲಿ ಕಂಡು ಬರುತ್ತಲ್ವ ಅದು. ಅದರ ಪ್ರೌಢ ದುಂಬಿಯನ್ನು ಎಲ್ಲ ರೈತರು ನೋಡಿರ್ತಾರೆ ಆದರೆ ಅದೇ ದುಂಬಿಯನ್ನು ಈ ಗೊಣ್ಣೆಹುಳುವಿನ ಪ್ರೌಢ ದುಂಬಿಯೆಂದು ತಿಳಿದಿರುವುದಿಲ್ಲ ಗೊಣ್ಣೆಹುಳುವು ರೈನಾಸಾರಸ್ ದುಂಬಿಯಾಗಿ ಮಾರ್ಪಾಡಾಗುತ್ತದೆ. ಈ ರೈನಾಸೆರಾ ದುಂಬಿಯು ತಿಪ್ಪೆಯಿಂದ ಹಾರಿ ತೆಂಗಿನ ಸುಳಿಯನ್ನು ಕೊರೆಯಲಾರಂಬಿಸುತ್ತದೆ. ಅಂದ್ರೆ ಇದು ಪ್ರೌಢ ಹಂತದಲ್ಲಿ ಮಾತ್ರ ಹಾನಿ ಮಾಡುತ್ತದೆ.ಮತ್ತು ಈ ದುಂಬಿಯು ಮಿಲನ ಹೊಂದಿ ಹೆಣ್ಣು ದುಂಬಿಗಳು ತಿಪ್ಪೆಗಳನ್ನು ಹುಡುಕಿಕೊಂಡು ಹೋಗಿ ಅಲ್ಲೀಯೇ/ಅದರೊಳಗೆ ಹೋಗಿ ಮೊಟ್ಟೆಗಳನ್ನಿಡುತ್ತವೆ. ಈ ಹುಳುವಿನ ಹತೋಟಿಗೆ ನಾನೇನಾದ್ರು ಕೀಟನಾಶಕ ಬಳಸಿ ಹತೋಟಿ ಮಾಡಬೇಕೆಂದ್ರೆ ನಮಗೆ ಇವರ ಜೀವನ ಚರಿತ್ರೆ ಗೊತ್ತಿರಲ್ಲ ಅಂದ್ಕೊಳ್ಳಿ, ಅವಾಗ ಏನ್ಮಾಡ್ತಿದ್ವಿ ಇಡೀ ತೆಂಗಿನ ಮರಕ್ಕೆ ಔಷಧಿಯನ್ನು ಸಿಂಪರಣೆ ಮಾಡುತ್ತಿದ್ವಿ ಹೌದು ತಾನೆ ಆದರೆ ಈಗ ಏನ್ಮಾಡ್ತಿದ್ದೇ. ಅಂದ್ರೆ, ಈ ಮರಿಹುಳುಗಳನ್ನು ತಿಪ್ಪೆಗಳಿಂದ ಆರಿಸಿ ತೆಗೆದು ಕೊಲ್ಲುವುದು. ಕೀಟನಾಶಕವನ್ನು ಸುಳಿಯದಂತೆ ಮಾತ್ರ ಇಡುವುದು, ಇನ್ನೂ ಮುಂತಾದ ಹತೋಟಿ ಕ್ರಮಗಳನ್ನು ನಾವು ಸಮಗ್ರವಾಗಿ ಮಾಡ್ತೇವೆ. ಇದು ಒಂದು ಉದಾಹರಣೆ.
ಇದೇ ತರಹ ನಾನು ಇನ್ನೊಂದು ಉದಾಹರಣೆ ಕೊಡುತ್ತೇನೆ. ಇದು ಈ ದಾಳಿಂಬೆಗೆ ಬರುವ ಹಣ್ಣು ಹೀರುವ ಪತಂಗ ಹಣ್ಣು ಕೊರಕದ ಚಿಟ್ಟೆಗಳು ಮಳೆಗಾಲದಲ್ಲಿ ಮಾತ್ರ ಹಣ್ಣನ್ನು ಕೊರೆಯುತ್ತವೆ. ಈ ಪತಂಗಗಳು ಹೊಲದಲ್ಲಿ ಕಾಣುವ ವಿವಿಧ ಜಾತಿಯ ಕಳೆಗಳ ಮೇಲೆ ಮೊಟ್ಟೆಗಳನಿಡುತ್ತವೆ, ಮೊಟ್ಟೆಯಿಂದ ಹೊರ ಬಾರದ ಮರಿಹುಳುಗಳು ಈ ಕಳೆಗಳನ್ನು ತಿಂದು ಜೀವಿಸುತ್ತವೆ. ಮತ್ತೆ ಕೋಶವಸ್ಥೆಯನ್ನು ದಾಟಿ ಪತಂಗ ಹಂತದಲ್ಲಿ ಮಾತ್ರ ರಾತ್ರಿ ಹೊತ್ತು ಹಣ್ಣಿನ ಮೇಲೆ ಕುಳಿತು ದಾಳಿಂಬೆ ಹಣ್ಣಿನಿಂದ ರಸವನ್ನು ಹೀರುತ್ತವೆ. ಇತ್ತೀಚಿಗೆ ದಾಳಿಂಬೆಯಲ್ಲಿ ರೈತರು ತುಂಬ ಕೀಟನಾಶಕಗಳನ್ನು ಸಿಂಪರಣೆ ಮಡುತ್ತಿದ್ದಾರೆ ಆದರೆ ಎಷ್ಟೆ ಕೀಟನಾಶಕ ಬಳಸಿದವರು ಇದನ್ನು ಹತೋಟಿಗೆ ತರಲು ಹಾಗುವುದಿಲ್ಲ.
ಯಾವುದೇ ಬೆಳೆಯಲ್ಲಿ ರೈತರು ಹೆಚ್ಚು ಸಂಕಷ್ಟಕ್ಕೆ ಒಳಗಾಗುವುದು ಕೀಟ ಮತ್ತು ರೋಗಗಳ ಬಾಧೆಯಿಂದ. ಯಾವುದೇ ಬೆಳೆಯಲ್ಲಿ ಈ ಎರಡು ಪೀಡೆಗಳು ಸುಮಾರು 30 ರಿಂದ 40 ರಷ್ಟು ಹಾನಿಮಾಡುತ್ತವೆ. ಕೆಲವೊಮ್ಮೆ ಶೇ 100 ರಷ್ಟು ಹಾನಿಯಾಗಿರುವ ಉದಾಹರಣೆಗಳಿವೆ. ಇವುಗಳ ಹತೋಟಿಗೆ ರೈತರು ಹೆಚ್ಚು ಹಣ ವ್ಯಯಿಸಿವುದು ಸರ್ವೇ ಸಾಮಾನ್ಯ. ಮತ್ತು ಬೆಳೆ ಬೆಳೆಯುವ ಖರ್ಚಿನಲ್ಲಿ ಶೇ 50 ರಷ್ಟು ಖರ್ಚನ್ನು ಇವುಗಳ ಹತೋಟಿಗೋಸ್ಕರನೇ ವ್ಯಯ ಮಾಡುತ್ತಾರೆ. ಈ ಖರ್ಚನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೀಟ ಮತ್ತು ರೋಗಗಳ ಬಾಧೆಯನ್ನು ಸರಿಯಾಗಿ ಗುರುತಿಸುವ need . .
ರೈತರು ಯಾವುದೇ ವಿಷಯದ ಬಗ್ಗೆ ಉದಾಸೀನರಾಗಬಾರದು ಮತ್ತು ಶ್ರಧ್ಧೆ ವಹಿಸಿದರೆ ಯಾವುದೇ ವಿಷಯವನ್ನು ವಿವಿಧ ಮೂಲಗಳಿಂದ ಕಲೇ ಹಾಕುವುದು ಕಷ್ಟ ಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ತಮ್ಮ ಧೈನಂದಿನ ಅನುಭವದಿಂದ ಮತ್ತು ಆಳವಾಗಿ ವಿಷಯವನ್ನು ಕಲೆ ಹಾಕುವುದರಿಂದ ಬೆಳೆಗೆ ಬರುವ ಕೀಟಗಳು, ಕೀಟಗಳ ಬಾಧೆಗಳಿಂದ ಎಲೆ ತಿಂದಿರುವುದು, ಎಲೆ ಮಡಿಚಿರುವುದು, ಕಾಂಡಕೊರೆದಿರುವುದು ಅಥವಾ ಹಣ್ಣು ರಸ ಹೀರಿರುವುದು ಮುಂತಾದ ಲಕ್ಷಣಗಳನ್ನು ಗುರುತಿಸಬಹುದು ಅದೇ ತರಹ ರೋಗದಿಂದ ಬರುವ ಎಲೆಚುಕ್ಕೆ, ಬಿಳಿಚುವಿಕೆ, ಹಳದಿ, ಕೊಳೆಯುವಿಕೆ, ಮುಂತಾದ ಲಕ್ಷಣಗಳನ್ನು ಗುರುತಿಸಬಹುದು . ಅದೇ ರೀತಿ ಪೋಷಾಕಾಂಶಗಳ ಕೊರತೆಯನ್ನು ತೋರಿಸುವ ಚಾರ್ಟ್ಗಳು ಕೂಡ ಕೆಲವು ಬೆಳೆಗಳಿಗೆ ಲಬ್ಯವಿದೆ. ಇಂತಹವುಗಳನ್ನು ಬಳಸಿ ಬಾಧೆಗಳನ್ನು ಗುರುತಿಸಬಹುದು.
ವಿವಿಧ ಕೀಟಗಳಿಗೆ ಸಾಕಷ್ಟು ಸಂಶೋಧನೆಯ ನಂತಹ ಸಮಗ್ರ ಪೀಡೆ ನಿರ್ವಹಣೆಯನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆ ನಿರ್ವಹಣಾ ಕ್ರಮಗಳೆಂದರೆ ಬೇಸಾಯ ಪದ್ಧತಿಗಳು, ಯಾಂತ್ರಿಕ ಪದ್ಧತಿ, ಭೌತಿಕ ಪದ್ಧತಿ, ಜೈವಿಕ ನಿಯಂತ್ರಣ ಮತ್ತು ಕೊನೆಯದಾಗಿ ರಾಸಾಯನಿಕಗಳ ಬಳಸುವಿಕೆ. ಅವುಗಳಲ್ಲಿ ಜೈವಿಕ ನಿಯಂತ್ರಣವು ಖರ್ಚನ್ನು ಕಡಿಮೆಮಾಡಿ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವ ಒಂದು ತಂತ್ರಜ್ಞಾನವಾಗಿದೆ. ಜೈವಿಕ ತಂತ್ರಜ್ಞಾನದಲ್ಲಿ ಕೀಟಗಳ ಸ್ವಾಭಾವಿಕ ಶತ್ರುಗಳನ್ನು ಬಳಸಿ ಹತೋಟಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಆದರೆ ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವದೆಲ್ಲೆಡೆ 16.39% ರೈತರು ಮಾತ್ರ ನೈಸರ್ಗಿಕ ಶತ್ರುಗಳ ಇರುವಿಕೆಯನ್ನು ಗುರುತಿಸಿ ಅವುಗಳನ್ನು ಕೀಟಗಳ ಹತೋಟಿಯಲ್ಲಿ ಬಳಸುತ್ತಿದ್ದಾರೆ. ಬದಲಾಗಿ, 52% ರೈತರು ರಾಸಾಯನಿಕ ಕೀಟನಾಶಕಗಳನ್ನು ಕೀಟನಿಯಂತ್ರಣದ ಮೊದಲ ಅಸ್ತ್ರವೆಂದು ತಿಳಿದುಕೊಂಡಿದ್ದಾರೆ.
ದಿನಗಳೆದಂತೆ ಕೀಟನಾಶಕಗಳ ಬಳಕೆ ಹೆಚ್ಚುತ್ತಿದ್ದು, ಇವು ಜೀವವೈವಿಧ್ಯತೆಯ ನಾಶಕ್ಕೆ ಕಾರಣೀಭೂತವಾಗುತ್ತಿವೆ. ಬಹಳಷ್ಟು ಪ್ರಯೋಜನಕಾರಿ ಜೀವಿಗಳನ್ನು ಸಹ ಕೊಲ್ಲುತ್ತಿವೆ. ಇದರ ಜೊತೆಗೆ ಪರಿಸರವನ್ನು ಸಹ ಹಾಳು ಮಾಡುತ್ತಿವೆ. ಆದರೆ ಒಂದು ಗಮನಿಸಬೇಕಾದ ಅಂಶವೆಂದರೆ ಇಷ್ಟೊಂದು ಕೀಟನಾಶಕಗಳ ಬಳಕೆಯನ್ನು ಮಾಡಿದರೂ ಸಹ ಜಾಗತಿಕ ಮಟ್ಟದಲ್ಲಿ ಕೃಷಿಯ ಇಳುವರಿಯ ನಷ್ಟವೂ ಕಡಿಮೆಯಾಗಿಲ್ಲ ಮತ್ತು ಕೃಷಿಯ ಲಾಭದಾಯಕವೂ ಹೆಚ್ಚಿಲ್ಲ. ಕೃಷಿ ರಾಸಾಯನಿಕಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಜೀವವೈವಿಧ್ಯತೆ, ಪರಿಸರ ಮತ್ತು ಮಾನವನ ಆರೋಗ್ಯದ ಮೇಲೆ ಕೀಟನಾಶಕ ಸಂಬಂಧಿತ ತೊಂದರೆಗಳನ್ನು ಕಡಿಮೆ ಮಾಡಲು, ಸಮಗ್ರ ಶಿಸ್ತಿನ ದೃಷ್ಠಿಕೋನ ಮತ್ತು ಸಾಮಾಜಿಕ ಜ್ಞಾನದ ಅಗತ್ಯವಿದೆ.
ರೈತರು ಪರಿಸರವನ್ನು ಉಪಯೋಗಿಸಿಕೊಳ್ಳುವ ರೀತಿ ಅವರ ಜ್ಞಾನ, ವರ್ತನೆ ಮತ್ತು ನಂಬಿಕೆಗಳ ಮೇಲೆ ನಿಂತಿದೆ. ಕೀಟ ಸಂಬಂಧಿತ ವಿಷಯಗಳನ್ನು ರೈತರು ಓದಿ ತಿಳಿದುಕೊಳ್ಳಬಹುದು ಅಥವಾ ಈಗಿನ ಕಂಪ್ಯೂಟರ್/ ಮೊಬೈಲ್ ಯುಗದಲ್ಲಿ ವಿಷಯಗಳನ್ನು ತಿಳಿದುಕೊಳ್ಳುವುದು ಕಷ್ಟವಾಗಲಾರದು. ರೈತರ ಜ್ಞಾನಾರ್ಜನೆಗೆ ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡುತ್ತಿವೆ. ಕೆಲವು ಜಾನಪದ ಮತ್ತು ಸಾಂಪ್ರದಾಯಿಕ ಜ್ಞಾನವು ವಂಶಪಾರಂಪರ್ಯವಾಗಿ ತಲೆಮಾರುಗಳಿಂದ ಹರಡಿ ಪರಿಸರ ಸಂಪನ್ಮೂಲ ರಕ್ಷಣೆಯಲ್ಲಿ ಸ್ಥಳೀಯವಾಗಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತವೆ. ನಾವು ದಿನ ನಿತ್ಯ ನೋಡುವ ಜಿರಲೆ, ನೊಣ, ಗೆದ್ದಲು, ಜೀರುಂಡೆ, ಗೊಣ್ಣೆಹುಳು, ಜೇನು, ಮುಂತಾದ ಕೀಟಗಳನ್ನು ನೋಡಿ ಇವಿಷ್ಟೆ ಕೀಟಗಳು ಈ ಭೂಮಿಯ ಮೇಲಿವೆ ಎಂದು ಕೊಂಡರೆ ಅದು ತಪ್ಪು ಗ್ರಹಿಕೆಯಾಗುತ್ತದೆ.
ಈ ಭೂಮಿಯ ಮೇಲೆ ಇದುವರೆಗೆ ಸುಮಾರು 18 ಲಕ್ಷ ಜೀವಿಗಳನ್ನು ಅಂದರೆ 1.8 ಮಿಲಿಯನ್ ಜೀವಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅವುಗಳಲ್ಲಿ ಶೇ. 60 ರಷ್ಟು ಅಂದರೆ ಸುಮಾರು 10 ಲಕ್ಷದಷ್ಟು, ಉಳಿಮೆ 3 ರಿಂದ 4 ಲಕ್ಷದಷ್ಟು ವಿವಿಧ ಜಾತಿಯ ಕಶೇರುಗಳನ್ನು ಕಂಡುಹಿಡಿದಿದ್ದಾರೆ. ಈ ಕೀಟಗಳು ಎಲ್ಲಾ ತರಹದ ಪರಿಸರದಲ್ಲಿ ಉದಾಹರಣೆಗೆ ಅರಣ್ಯ , ಮರುಭೂಮಿ, ಬೆಳಗಳು, ಮನೆಯೊಳಗೆ, ಹಿಮ, ನೀರಿನಲ್ಲಿ, ಸಮುದ್ರದ ಮೇಲ್ಭಾಗ ಅಥವಾ ಕೆಳಭಾಗದಲ್ಲಿ, ಪೆಟ್ರೋಲ್ ಗುಂಡಿಗಳಲ್ಲಿ ಅಂದರೆ ಎಲ್ಲಾ ತರಹದ ಜಾಗಗಳಲ್ಲಿ ವಿವಿಧ ತರಹದ ಸ್ಥಳೀಯ ಹವಾಗುಣಕ್ಕೆ ಹೊಂದಿಕೊಂಡಂತಹ ಕೀಟಗಳನ್ನು ನಾವು ನೋಡಬಹುದಾಗಿದೆ. ನಾವು ಇವುಗಳನ್ನು ಸರ್ವಾಂತರ್ಯಾಮಿ ಎಂದು ಕರೆಯಬಹುದು. ಈ ಕೀಟಗಳೆಲ್ಲವೂ ಆಹಾರ ಸರಪಳಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ.
ಒಂದು ಪ್ರಮುಖ ಅಂಶವೆಂದರೆ ರೈತರು ತಾವು ಬೆಳೆಯುವ ಬೆಳೆಗಳ ಕೀಟಗಳ ಬಗ್ಗೆ ತಿಳಿದುಕೊಂಡಿದ್ದರೆ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಬಳಸಿ ಪರಿಸರ ಸಂರಕ್ಷಣೆಯಲ್ಲಿ ರೈತರು ಕೈಜೋಡಿಸಬಹುದಾಗಿದೆ. ವಾಸ್ತವವಾಗಿ ರೈತರು ಹುಟ್ಟು ಪ್ರಯೋಗಕಾರರು ಮತ್ತು ನವೀನ ತಂತ್ರಜ್ಞಾನಗಳನ್ನು ಅವರೇ ರೂಪಿಸಿಕೊಳ್ಳುವುದರಲ್ಲಿ ಮತ್ತು ಅಳವಡಿಸಿಕೊಳ್ಳುವುದರಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಆದರೆ ಕೀಟ ಹತೋಟಿಯಲ್ಲಿ ಯಾವ ಕ್ರಮಗಳನ್ನು ಅನುಸರಿಸಿದರೆ ದೂರದೃಷ್ಟಿಯಿಂದ ಒಳ್ಳೆಯದು ಎಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಾಗಿದೆ.
ಸಿ. ಎಂ. ಕಲ್ಲೇಶ್ವರಸ್ವಾಮಿ
ಸಹಾಯಕ ಪ್ರಾಧ್ಯಾಪಕರು,
ಕೀಟಶಾಸ್ತ್ರ ವಿಭಾಗ
ಕೃಷಿ ಮಹಾವಿದ್ಯಾಲಯ,
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,
ನವಿಲೆ, ಶಿವಮೊಗ್ಗ – 577 204
ಒobiಟe ಓಔ; 944 95 37578