ಶಿವಮೊಗ್ಗ, ಆಗಸ್ಟ್ 11 : ಎಲ್ಲಾ ಕಾಯಿಲೆಗಳ ನಿಯಂತ್ರಣಕ್ಕೆ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದೇ ಪರಿಹಾರ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ತುಂಗಾನಗರ ಪ್ರಸೂತಿ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರೋಟಾ ವೈರಸ್ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ ಪೋಷಣ್ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಕ್ಕಳಲ್ಲಿ ರೋಟಾ ವೈರಸ್ನಿಂದ ಮರಣ ಸಂಭವಿಸುವ ಸಾಧ್ಯತೆ ಅಧಿಕವಾಗಿದ್ದು, ಅದನ್ನು ನಿಯಂತ್ರಿಸಲು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನವಜಾತ ಶಿಶುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಅವರು ಕರೆನೀಡಿದರು.
ಮಕ್ಕಳಲ್ಲಿ ರೋಟಾ ವೈರಸ್ ಸೋಂಕು(ಅತಿಸಾರ ಬೇದಿ) ಕಡಿಮೆ ಮಾಡುವ ಉದ್ದೇಶದಿಂದ ಲಸಿಕೆಯನ್ನು ಹಾಕಲಾಗುತ್ತಿದೆ. ಪ್ರತಿ ವರ್ಷ ಮಾರಕ ರೋಗಗಳಿಂದ ಲಕ್ಷಾಂತರ ಮಕ್ಕಳು ಮರಣ ಹೊಂದುತ್ತಿದ್ದಾರೆ. ಮಕ್ಕಳ ಮರಣ ಪ್ರಮಾಣವನ್ನು ನಿಯಂತ್ರಿಸಲು ಇಂತಹ ಅನೇಕ ಲಸಿಕಾ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಜನಸಾಮಾನ್ಯರು ಮಕ್ಕಳ ಚಿಕಿತ್ಸೆಗಾಗಿ ಸಾಕಷ್ಟು ಹಣ ವ್ಯಯ ಮಾಡುವ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಸು¯ಭವಾಗಿ ದೊರೆಯುವ ಚಿಕಿತ್ಸೆಯನ್ನು ಪಡೆಯಬೇಕು. ಅಲ್ಲದೆ ಸರ್ಕಾರದ ಜನಪರ ಕಾರ್ಯಕ್ರಮಗಳ ಲಾಭ ಪಡೆದುಕೊಳ್ಳುವಂತೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಮಹಾನಗರಪಾಲಿಕೆ ಸದಸ್ಯ ಶ್ರೀಮತಿ ¯ಕ್ಷ್ಮೀಶಂಕರನಾಯ್ಕ್, ಡಾ|ನಾಗರಾಜ್ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶೇಷಪ್ಪ, ಡಾ||ಅಚ್ಯುತ, ಡಾ||ದಿನೇಶ್, ಡಾ||ಹನುಮಂತಪ್ಪ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.