ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯಗಳ ಉಸಾಬರಿ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಏಕೆ ಬೇಕು? ನಮ್ಮ ಪಕ್ಷದ ದೊಡ್ಡಣ್ಣನವರ ವಿಷಯ ಅವರ ವ್ಯಾಪ್ತಿಗೆಬರುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಹಕ್ಕು ಕೂಡ ಅವರಿಗಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ರಮೇಶ್ ಶಂಕರಘಟ್ಟ ಹೇಳಿದ್ದಾರೆ.
ಈ ಕುರಿತಾಗಿ ಹೇಳಿಕೆ ನೀಡಿರುವ ಅವರು, ತಮ್ಮ ಪಕ್ಷದಲ್ಲಿಯೇ ಸಾವಿರ ಹುಳುಕುಗಳನ್ನು ಇಟ್ಟುಕೊಂಡು 5 ವರ್ಷ ಅತ್ಯಂತ ಸಮರ್ಥವಾಗಿ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯನವರ ಬಗ್ಗೆಯಾಗಲಿ ಅಥವ ಪಕ್ಷದ ಆಂತರಿಕ ವಿಷಯಗಳ ಉಸಾಬರಿ ಈಶ್ವರಪ್ಪನವರಿಗ್ಯಾಕೆ..? ಎಂದು ಪ್ರಶ್ನಿಸಿದ್ದಾರೆ.
ಈಶ್ವರಪ್ಪನವರು ನಿನ್ನೆ ದಿನ ತುಂಗ ನದಿಗೆ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ಸಿದ್ದರಾಮೋತ್ಸವ ಹಾಗೂ ಪಕ್ಷದ ಬಗ್ಗೆ ಈಶ್ವರಪ್ಪನವರು ಆಡಿರುವ ಮಾತಿಗೆ ಪ್ರತಿಕ್ರಿಯೆ ನೀಡಿ, ಕನಿಷ್ಠ ಪಕ್ಷ 4 ವರ್ಷ ಸಮರ್ಥ, ಪೂರ್ಣ ಅವಧಿಯ ಮುಖ್ಯಮಂತ್ರಿಯನ್ನು ಕೊಡಲಾಗದವರು, ಮುಖ್ಯಮಂತ್ರಿಯಾಗಿ ಸಾವಿರಾರು ಬಡಜನರಿಗೆ ಸಹಾಯವಾಗುವ ಯೋಜನೆಗಳನ್ನು ರೂಪಿಸಿದ ಜನಪರ ನಾಯಕರಾದ ಸಿದ್ದರಾಮಯ್ಯನವರನ್ನ ಕುರಿತು ಆಡಿರುವ ಅವರ ಮಾತುಗಳು ಅಸಹನೆಯಿಂದ ಕೂಡಿದೆ ಎಂದಿದ್ದಾರೆ.
ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಸೋತುಹೋಗಬಹುದಾದ ಭೀತಿ ಇವರ ಮಾತುಗಳಲ್ಲಿ ಕಾಣಬಹುದು. ಸ್ವತ: ತಮ್ಮ ಸರ್ಕಾರದಲ್ಲಿ ಪೂರ್ಣಾವಧಿ ಮುಗಿಯುವುದರೊಳಗಾಗಿ ಮಂತ್ರಿ ಪದವಿ ಉಳಿಸಿಕೊಳ್ಳಲಾಗದೇ ರಾಜೀನಾಮೆ ಕೊಟ್ಟವರು, ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಸ್ವಚ್ಚ, ಭ್ರಷ್ಟಾಚಾರರಹಿತ ಆಡಳಿತ ನಡೆಸಿದ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತಿರುವುದು ಒಂದು ದೊಡ್ಡ ದುರಂತ.
ತುಂಗಾ ನದಿಗೆ ಭಾಗಿನ ಅರ್ಪಿಸುವ ಶುಭ ಸಂದರ್ಭದಲ್ಲಿಯೂ ನಾಡಿನ ಒಳಿತಿನ ಬಗ್ಗೆ ಪ್ರಾರ್ಥಿಸದೇ, ಇನ್ನೊಬ್ಬರ ಬಗ್ಗೆ ಕರಬುವ, ಹೊಟ್ಟೆಕಿಚ್ಚಿನಿಂದ ಮಾತನಾಡುವ ಈಶ್ವರಪ್ಪನವರ ಮನಸ್ಥಿತಿ ಎಂತಹದ್ದು ಎಂದು ಜನ ಅರ್ಥ ಮಾಡಿಕೊಳ್ಳಬೇಕಿದೆ. ಈಶ್ವರಪ್ಪನವರು, ನಮ್ಮ ನಾಯಕರ ಮತ್ತು ಪಕ್ಷದ ಆಂತರಿಕ ವಿಷಯಗಳ ಕುರಿತು ಆಡಿರುವ ಮಾತುಗಳನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.