ಶಿವಮೊಗ್ಗ, ಫೆಬ್ರವರಿ 19 : ಹುಣಸೋಡು ಸ್ಪೋಟ ಪ್ರಕರಣದ ನಂತರ ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಲ್ಲುಕ್ವಾರಿಗಳು ಸ್ಥಗಿತಗೊಂಡು ಜಿಲ್ಲೆಯಲ್ಲಿನ ಅಭಿವೃದ್ಧಿ ಚಟುವಟಿಕೆಗಳು, ಕಟ್ಟಡ ನಿರ್ಮಾಣ ಮುಂತಾದ ಕಾರ್ಯಗಳಿಗೆ ತೀವ್ರತರಹದ ಅಡಚಣೆ ಉಂಟಾಗುತ್ತಿದ್ದು, ಕೂಡಲೇ ಕಲ್ಲುಕ್ವಾರಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಅವರು ಇಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತ್ರೈಮಾಸಿಕ ಕೆ.ಡಿ.ಪಿ.ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ವಿಷಯಕ್ಕೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕನಾಯ್ಕ್ ಅವರು ದನಿಗೂಡಿಸಿ, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳು ಜಲ್ಲಿ ದೊರೆಯುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ||ಸೆಲ್ವಮಣಿ ಅವರು ಸಭೆಗೆ ಮಾಹಿತಿ ನೀಡಿ, ಕಾನೂನುಬದ್ಧವಾಗಿರುವ ಎಲ್ಲಾ ಕಲ್ಲು ಕ್ವಾರಿಗಳನ್ನು ಆರಂಭಿಸಲು ನ್ಯಾಯಾಲಯದ ಅನುಮತಿ ಇದೆ. ಪ್ರಸ್ತುತ ಅರಣ್ಯ ಪ್ರದೇಶದ 10ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆಗೆ ನಿಬರ್ಂಧ ವಿಧಿಸುವಂತೆ ಅರಣ್ಯ ಇಲಾಖೆ ನ್ಯಾಯಾಲಕ್ಕೆ ಅಫಿಡೆವಿಟ್ ಸಲ್ಲಿಸಿದ್ದಾರೆ. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಈ ಹಂತದಲ್ಲಿ ಯಾವುದೇ ನಿರ್ಣಯ ಕೈಗೊಂಡು ಅನುಷ್ಠಾನಕ್ಕೆ ಪ್ರಯತ್ನಿಸುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಲಿದೆ. ಆದ್ದರಿಂದ ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಕಾಯಲೇಬೇಕಾಗಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಕಲ್ಲುಕ್ವಾರಿಗಳ ವಿಷಯಕ್ಕೆ ಸಂಬಂಧಿಸಿದಂತೆ ಆಯಾ ತಾಲೂಕು ಮಟ್ಟದ ಸಮಸ್ಯೆಗಳನ್ನು ಆಯಾ ತಾಲೂಕಿನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೇಷ್ಮೇ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ನಾರಾಯಣಗೌಡ ಅವರು, ಶಾಲಾ ಸಮವಸ್ತ್ರ ಹಾಗೂ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದಂತೆ ಶಾಲಾ-ಕಾಲೇಜುಗಳ ಆವರಣಗಳಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಹಾಗೂ ಅಗತ್ಯವಿರುವಲ್ಲಿ ಪೊಲೀಸ್ ಸಿಬ್ಬಂಧಿಯನ್ನು ನಿಯೋಜಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸೂಚಿಸಿದ ಅವರು, ಕೊರೋನ ನಿಯಂತ್ರಿಸುವಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕ್ರಮವನ್ನು ಪ್ರಶಂಸಿಸಿದರು.