ಬೇಸಿಗೆ ದಾಹ ತಣಿಸಲು, ಆರೋಗ್ಯಕರ ದೇಹಕ್ಕಾಗಿ ಕಲ್ಲಂಗಡಿಯ ಬೇಡಿಕೆ ಬಿಸಿಲನಾಡಿನಲ್ಲಿ ಹೆಚ್ಚುತ್ತಿದೆ. ಪ್ರತಿ ವರ್ಷ ಏರುತ್ತಿರುವ ಸೂರ್ಯನ ತಾಪಮಾನ ಮತ್ತು ಉರಿಬಿಸಿಲುಗಳಿಂದ ರಕ್ಷಿಸಿಕೊಳ್ಳಲು ಮಕ್ಕಳಿಂದ ಹಿಡಿದು ಹಿರಿಯರಿಗೂ ಅಚ್ಚುಮೆಚ್ಚು. ಅತಿ ಹೆಚ್ಚು ನೀರಿನಂಶ (91%), ವಿಟಾಮಿನ್ ಸಿ, ನಾರು, ಪೊಟ್ಯಾಷಿಯಂ, ಅಮೈನೋ ಆಸಿಡ್ ಹೊಂದಿರುವಂತಹ ಹಣ್ಣು. ರಕ್ತಒತ್ತಡ, ಮೂತ್ರಪಿಂಡಗಳ ಸಮಸ್ಯೆ ಮತ್ತು ದೇಹದ ತಾಪಮಾನ ನಿವಾರಣೆ ಮತ್ತು ಇನ್ಸುಲೀನ್ ಉತ್ಪತ್ತಿಗೆ ಸಹಕಾರಿ. ಕರ್ನಾಟಕ ರಾಜ್ಯದ ಬಹುತೆಕ ಎಲ್ಲಾ ಪ್ರದೇಶಗಳಲ್ಲಿ ಈ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ.

ನಾಟಿ ಕಾಲ : ಡಿಸೆಂಬರ್ ದಿಂದ ಮೇ ತಿಂಗಳು
ತಳಿಗಳ ಆಯ್ಕೆ : ಶುಗರ್ ಬೇಬಿ, ಅರ್ಕಾ ಮಾಣಿಕ್, ಶುಗರು ಕ್ವಿನ್, ಮೆಲ್ಲೋಡಿ, ಇತ್ಯಾದಿ
ಹತ್ತು ಸೂತ್ರಗಳು

ಸೂಕ್ತ ತಳಿ ಹಾಗೂ ರೋಗ ರಹಿತ ಸಸಿಗಳ ಆಯ್ಕೆ.

ಮಣ್ಣು ಮತ್ತು ನೀರಿನ ಲವಣಾಂಶ, ರಸಸಾರ ಪರೀಕ್ಷಿಸಿಕೊಳ್ಳುವುದು.

ಜೈವಿಕ ಗೊಬ್ಬರ ಬಳಕೆ ಮತ್ತು ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ.

ರಸಾವರಿ ಕ್ರಮ ಅನುಸರಿಸುವುದು.

ಕುಡಿ ಚಿವುಟುವಿಕೆ ಮತ್ತು ಸಸ್ಯ ಪ್ರಚೋದಕಗಳ ಬಳಕೆ.

ಜೇನುಪೆಟ್ಟಿಗೆ ಎಕರೆಗೆ ಎರಡು ಅಳವಡಿಸುವುದು.

ಬೇಸಿಗೆ ಬಿಸಿಲಿಗೆ ತಕ್ಕಂತೆ ನೀರಾವರಿ ಮತ್ತು ಸಸ್ಯ ಸಂರಕ್ಷಣೆ.

ಮಾಧ್ಯಮ, ಸೂಕ್ಷ್ಮ ಪೋಶಕಾಂಶ ನಿರ್ವಹಣೆ.

ಕಾಯಿ ಹಂತದಲ್ಲಿ ಕೀಟಗಳ ನಿರ್ವಹಣೆ.

ಸ್ಥಳೀಯ ಹಾಗೂ ದೂರದ ಮಾರುಕಟ್ಟೆಗೆ ಕಾಯಿ ವರ್ಗೀಕರಣ.

ಬೇಸಾಯ ಕ್ರಮಗಳು : ಎಕರೆಗೆ 10 ರಿಂದ 16 ಟನ್ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಹಾಗೂ ಒಂದು ಕೆ.ಜಿ. ಟ್ರೈಕೋಡರ್ಮಾ ಜೈವಿಕ ಗೊಬ್ಬರ ನಂತರ ಮೂರು ಅಡಿ ಅಗಲ, ಒಂದು ಅಡಿ ಎತ್ತರದ ಏರು ಮಡಿಗಳನ್ನು ತಯಾರಿಸಬೇಕು.
ಅಂತರ : ಒಂದೂವರೆ ಅಡಿ ಗಿಡದಿಂದ ಗಿಡಕ್ಕೆ (ಜಿಗ್‍ಜಾಗ್ ನಾಟಿ ಪದ್ಧತಿ)
ಬೀಜ : 350 ಗ್ರಾಂ. ಪ್ರತಿ ಎಕರೆಗೆ. (6000 ಸಸಿಗಳು)
ಪ್ರತಿ ಬಳ್ಳಿಯಲ್ಲಿ 3-4 ಕಾಯಿಗಳನ್ನು ಮಾತ್ರ ಬಿಟ್ಟು ಉಳಿದ ಕಾಯಿಗಳನ್ನು ತೆಗೆಯುವುದರಿಂದ ಉತ್ತಮ ಗಾತ್ರದ ಹಣ್ಣು ಪಡೆಯಬಹುದು. ಹೆಚ್ಚಿನ ಇಳುವರಿ ಪಡೆಯಲು ಎಕರೆಗೆ 2 ಜೇನು ಪೆಟ್ಟಿಗೆ ಇಡುವುದರಿಂದ ಹೆಚ್ಚಿನ ಪರಾಗಸ್ಪರ್ಶಕ್ಕೆ ನೇರ. ಕಾಯಿ ಗಾತ್ರ ಹೆಚ್ಚಿಸಲು – ಕಾಯಿ ನಿಂಬೆ ಗಾತ್ರವಿರುವಾಗ 20 ಮಿ.ಲೀ. ಜಿಬ್ಬರ್‍ಲಿಕ್ ಆಸಿಡ್ ಒಂದು ಲೀಟರ್ ನೀರಿಗೆ ಅದ್ದುವುದರಿಂದ ಹಣ್ಣಿನ ಗಾತ್ರ ಮತ್ತು ಗುಣಮಟ್ಟ ಹೆಚ್ಚುವುದು. ನಾಟಿ ಮಾಡಿದ 10 ದಿನಗಳ ನಂತರ ಚಳಿ ಹಾಗೂ ಬಿಸಿಲು ಸನ್ನಿವೇಶಕ್ಕೆ ತಕ್ಕಂತೆ ರಸವಾರಿ ಕ್ರಮ ಅನುಸರಿಸಬೇಕು.
ಸಸ್ಯ ಸಂರಕ್ಷಣೆ : ಸಸ್ಯಹೇನು ಎಲೆಗಳನ್ನು ತಿನ್ನುವುದರಿಂದ ಮರಿ ಹುಳುಗಳ ನಿರ್ವಹಣೆ ಅತ್ಯಗತ್ಯ. ನುಸಿ ಎಲೆ ಹಾಗೂ ಕಾಯಿಗಳ ರಚನೆಗೆ ಧಕ್ಕೆ ಉಂಟು ಮಾಡುತ್ತವೆ. ಎಕರೆಗೆ 5 ರಿಂದ 8 ಹಳದಿ ಅಂಟಿನ ಬಲೆ ಹಾಕಬೇಕು. ಹೇನು ಥ್ರಿಪ್ಸ್ ನುಸಿ ನಿರ್ವಹಣೆಗೆ ಇಮಿಡಾಕ್ಲೋಪ್ರಿಡ್ 0.5 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಬೂದಿರೋಗ : ಬಿಳಿ ಬಣ್ಣದ ಬೂದಿ ಚುಕ್ಕೆಗಳು ಎಲೆ ಮತ್ತು ಕಾಂಡದಲ್ಲಿ ಕಾಣಿಸಿಕೊಂಡು ಎಲೆ ಉದುರುವ ಸಾಧ್ಯತೆ. ಹೆಕ್ಸಾಕೊನಾಜೋಲ್ 1 ಮಿ.ಲಿ. ಅಥವಾ ಕಾರ್ಬೆಂಡಾಜಿಮ್ 0.5 ಗ್ರಾಂ. ಪ್ರತಿ ಲೀಟರ್ ನೀರಗೆ ಬೆರೆಸಿ ಸಿಂಪಡಿಸಿದಲ್ಲಿ ಈ ರೋಗದ ನಿರ್ವಹಣೆ ಮಾಡಬಹುದು.
ಮುಟುರು ರೋಗ : ಇದು ವೈರಸ್ ರೋಗವಾಗಿದ್ದು, ಥ್ರಿಪ್ಸ್ ನುಸಿಯಿಂದ ಗಿಡದಿಂದ ಗಿಡಕ್ಕೆ ಹರಡುತ್ತದೆ. ಅತಿ ಮುದುಡ ಕಂಡು ಬಂದಲ್ಲಿ ಸಂಪೂರ್ಣ ರೋಗ ಪೀಡಿತ ಗಿಡವನ್ನು ಕಿತ್ತು, ಬೇರೆ ಆರೋಗ್ಯವಂತ ಗಿಡಗಳಿಗೆ ಹರಡದಂತೆ ನೋಡಿಕೊಳ್ಳಬೇಕು.
ಕೊಯ್ಲು ಮತ್ತು ಇಳುವರಿ: ಕಲ್ಲಂಗಡಿ ಬಳ್ಳಿಯ ಹಣ್ಣಿನ ಹತ್ತಿರದ ಲತ ತಂತು ಒಣಗಲು ಪ್ರಾರಂಭಿಸಿದಾಗ ಅಥವಾ ಹಣ್ಣನ್ನು ಬೆರಳಿನಿಂದಲೇ ಬಾರಿಸಿದರೆ ಮಂದ ಶಬ್ದ ಬರುವುದು. ಸರಾಸರಿ 25 ರಿಂದ 35 ಟನ್ ಪ್ರತಿ ಎಕರೆಗೆ ಇಳುವರಿ ಪಡೆಯಬಹುದು. ಸ್ಥಳಿಯ ಹಾಗೂ ದೂರದ ಮಾರುಕಟ್ಟೆಗೆ ತಕ್ಕಂತೆ ಕಾಯಿ ವರ್ಗೀಕರಣ ಮಾಡಿ ಉತ್ತಮ ದರ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಡಾ. ಪಿ. ವಾಸುದೇವ್ ನಾಯ್ಕ್, ಡಾ. ಜಹೀರ್ ಅಹಮ್ಮದ್, ಕೆ.ವಿ.ಕೆ. ವಿಜ್ಞಾನಿಗಳು

error: Content is protected !!