ಶಿವಮೊಗ್ಗ ಜೂನ್ 15 : ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ-ಮುಂಗಾರು 2022 ರಡಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಾಯಿಸಿಕೊಳ್ಳುವ ಉದ್ದೇಶದಿಂದ ಮಾಹಿತಿ ಮತ್ತು ಪ್ರಚಾರ ನೀಡುವ ವಾಹನಗಳಿಗೆ ಜಿಲ್ಲಾಡಳಿತ ಕಚೇರಿ ಆವರಣದಲ್ಲಿ ಇಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್‍ಕುಮಾರ್ ಮಾಹಿತಿ ನೀಡಿ, ಕೃಷಿ ಇಲಾಖೆ ಮತ್ತು ಅಗ್ರಿಕಲ್ಕಚರ್ ಇನ್‍ಶ್ಯೂರೆನ್ಸ್ ಕಂಪೆನಿ ಸಹಯೋಗದಲ್ಲಿ ಈ ಪ್ರಚಾರ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 07 ತಾಲ್ಲೂಕುಗಳ ಗ್ರಾ.ಪಂ, ಹೋಬಳಿಗಳಿಗೆ ತೆರಳಿ ರೈತರಿಗೆ ಮಾಹಿತಿ ನೀಡಲು 07 ಪ್ರಚಾರದ ವಾಹನಗಳಿಗೆ ಇಂದು ಚಾಲನೆ ನೀಡಲಾಗಿದ್ದು ಈ ವಾಹನಗಳು ಒಟ್ಟು 15 ದಿನಗಳ ಕಾಲ ಕಾರ್ಯನಿರ್ವಹಿಸಲಿವೆ.
ಬೆಳೆ ಸಾಲ ಪಡೆಯದ ರೈತರು ಈ ಯೋಜನೆಯಿಂದ ಸಾಮಾನ್ಯವಾಗಿ ಹೊರಗೆ ಉಳಿಯುತ್ತಿದ್ದಾರೆ. ಪ್ರಕೃತಿ ವಿಕೋಪಗಳಾದ ಆಲಿಕಲ್ಲು, ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಯಂತ ಅನಿಶ್ಚಿತತೆ ಎದುರಾದಾಗ ರೈತರು ನಷ್ಟಕ್ಕೀಡಾಗುತ್ತಾರೆ. ಇದನ್ನು ತಪ್ಪಿಸಿ ನಿಶ್ಚಿತ ಆದಾಯ ತರುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಯಲ್ಲಿ ಅಗ್ರಿಕಲ್ಚರ್ ಇನ್‍ಶ್ಯೂರೆನ್ಸ್ ಕಂಪೆನಿಯ ಸಹಯೋಗದೊಂದಿಗೆ 2022-23 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೋಬಳಿ ಹಾಗೂ ಗ್ರಾ.ಪಂ ಮಟ್ಟದಲ್ಲಿ ಈ ಯೋಜನೆ ಅನುಷ್ಟಾನಗೊಳಿಸಲು ಮಂಜೂರಾತಿ ನೀಡಿದೆ.
ಸಾಲ ಪಡೆದವರು ಈ ಯೋಜನೆಯ ವ್ಯಾಪ್ತಿಗೊಳಪಡುತ್ತಾರೆ. ಆದರೆ ಸಾಲ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿ ಈ ಬೆಳೆವಿಮೆಗೆ ನೋಂದಣಿಯಾಗುತ್ತಿಲ್ಲ. ಆದ ಕಾರಣ ನಿಶ್ಚಿತ ಆದಾಯ ಪಡೆಯಲು ರೈತರು ಈ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಬೇಕೆಂಬ ಉದ್ದೇಶದಿಂದ ಪ್ರಚಾರ ಮಾಡಲಾಗುತ್ತಿದೆ ಎಂದರು.
ಈ ವೇಳೆ ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್, ಕೃಷಿ ಇಲಾಖೆ ಉಪನಿರ್ದೇಶಕ ಬಸವರಾಜ್, ಅಗ್ರಿಕಲ್ಚರ್ ಇನ್‍ಶ್ಯೂರೆನ್ಸ್ ಕಂಪನಿ ಡೆಪ್ಯುಟಿ ಮ್ಯಾನೇಜರ್ ಪ್ರವೀಣ್ ಕುಮಾರ್, ಇತರೆ ಸಿಬ್ಬಂದಿ ಹಾಜರಿದ್ದರು.