ಶಿವಮೊಗ್ಗ ಜುಲೈ 11 : ಬೆಳೆ ಹಾನಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪರಿಹಾರ ಪಡೆಯಲು ರೈತರು ಜುಲೈ 31 ರೊಳಗೆ ಬ್ಯಾಂಕುಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು.
ಪ್ರಕೃತಿ ವ್ಯತ್ಯಯದಿಂದ ಕಾಲಕಾಲಕ್ಕೆ ಮಳೆಯಾಗದೆ ಬೆಳೆ ಹಾನಿಗೀಡಾದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂದು ಕೇಂದ್ರ ಸರ್ಕಾರ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದ್ದು, ಈಗ ಬೆಳೆ ವಿಮೆ ಮಾಡಿಸಿಕೊಳ್ಳಲು ಸೂಕ್ತ ಸಮಯ. ಮುಂಗಾರು ಹಂಗಾಮು ಪ್ರಾರಂಭವಾಗಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ.
ಒಂದು ವೇಳೆ ಹವಾಮಾನ ವೈಪರೀತ್ಯದಿಂದ ಮಳೆ ಹೆಚ್ಚಾದಲ್ಲಿ ಅಥವಾ ಸರಿಯಾಗಿ ಬಾರದೆ ಹೋದಲ್ಲಿ ಬೆಳೆ ಹಾನಿಯಾಗುವ ಸಂಭವವಿದೆ. ಬೆಳೆವಿಮೆ ಕಟ್ಟಿದ ರೈತರು ಒಂದು ವೇಳೆ ಅತಿಯಾದ ಮಳೆಯಿಂದ ಬೆಳೆ ನಷ್ಟವಾದರೆ 72 ಗಂಟೆಯೊಳಗೆ ತಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಇಂತಹ ಸಂದರ್ಭದಲ್ಲಿ ವೈಯಕ್ತಿಕ ಹಾನಿ ಪ್ರಮಾಣ ಅಥವಾ ಇಳುವರಿ ಆಧಾರದ ಮೇಲೆ ವಿಮೆ ಪರಿಹಾರ ಸಿಗಲಿದೆ. ಬೆಳೆ ವಿಮೆ ಮತ್ತು ಬೆಳೆ ನಿರ್ವಹಣೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ತಿಳಿಸಿದ್ದಾರೆ.