ಶಿವಮೊಗ್ಗ, ಮಾರ್ಚ್-11: ಕರೋನಾ ವೈರಸ್ ನಿರ್ವಹಣೆಯಲ್ಲಿ ಎಲ್ಲಾ ಇಲಾಖೆಗಳು ಹಾಗೂ ಸಮನ್ವಯದಿಂದ ಏಕರೂಪದ ನಿರ್ವಹಣಾ ವ್ಯವಸ್ಥೆ (ಎಸ್‍ಒಎಸ್) ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಸೂಚನೆ ನೀಡಿದರು. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೋನಾ ವೈರಸ್ ನಿರ್ವಹಣೆ ಕುರಿತು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು. ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಕರೋನಾ ವೈರಸ್ ಪ್ರಯೋಗಾಲಯವನ್ನು ಪ್ರಾರಂಭಿಸಲಾಗಿದೆ. ಕರೋನಾ ವೈರಸ್ ಪ್ರಕರಣಗಳ ನಿರ್ವಹಣೆಯಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳಬೇಕು. ಅನಗತ್ಯ ಗೊಂದಲಗಳಿಗೆ ಆಸ್ಪದವಾಗದಂತೆ, ವದಂತಿಗಳು ಹರಡಲು ಅವಕಾಶವಾಗದಂತೆ ಕಾರ್ಯನಿರ್ವಹಿಸಬೇಕು. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಖಾಸಗಿ ವೈದ್ಯರಿಗೆ ಕರೋನಾ ವೈರಸ್ ಬಗ್ಗೆ ಸೂಕ್ತ ತರಬೇತಿಯನ್ನು ಒದಗಿಸಬೇಕು ಎಂದು ಅವರು ಸೂಚನೆ ನೀಡಿದರು. ಮಾಸ್ಕ್ ಧರಿಸಲು ಒತ್ತಾಯಿಸಬಾರದು: ಕೆಲವು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಮಾಸ್ಕ್ ಧರಿಸಿ ಬರಲು ಒತ್ತಾಯಿಸಲಾಗುತ್ತಿರುವ ಬಗ್ಗೆ ಮಾಹಿತಿ ಇದೆ. ವೈರಲ್ ಜ್ವರದಂತಹ ರೋಗ ಲಕ್ಷಣಗಳು ಇರುವ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲಿ ಚಿಕಿತ್ಸೆ ನೀಡಬೇಕು. ರೋಗ ಲಕ್ಷಣ ಇಲ್ಲದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರ್ಯಾಪಿಡ್ ರೆಸ್ಪಾನ್ಸ್ ತಂಡ ರಚನೆ: ಮೆಗ್ಗಾನ್ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ವೈದ್ಯರನ್ನು ಒಳಗೊಂಡ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ರಚನೆ ಮಾಡಲಾಗಿದೆ. ದಿನದ 24ಗಂಟೆ ಸೇವೆ ಲಭ್ಯವಿದ್ದು, ಮೆಗ್ಗಾನ್‍ನ ಎಲ್ಲಾ ವೈದ್ಯರಿಗೆ ಹಾಗೂ ನರ್ಸಿಂಗ್ ಸಿಬ್ಬಂದಿಗಳಿಗೆ ಕರೋನಾ ವೈರಸ್ ರೋಗಿಗಳ ನಿರ್ವಹಣೆ ಕುರಿತು ಸೂಕ್ತ ತರಬೇತಿಯನ್ನು ನೀಡಲಾಗಿದೆ ಎಂದು ಶಿವಮೊಗ್ಗ ಮೆಡಿಕಲ್ ಕಾಲೇಜು ನಿರ್ದೇಶಕ ಡಾ.ಲೇಪಾಕ್ಷಿ ಅವರು ಮಾಹಿತಿ ನೀಡಿದರು. ವಿದೇಶಗಳಿಂದ ಆಗಮಿಸುವವರ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಈಗಾಗಲೆ ಸಾರ್ವಜನಿಕವಾಗಿ ಮನವಿ ಮಾಡಲಾಗಿದೆ. ಟ್ರಾವೆಲ್ ಏಜೆನ್ಸಿಗಳು ಹಾಗೂ ಹೊಟೇಲ್‍ನವರು ಜಿಲ್ಲೆಗೆ ಆಗಮಿಸುವ ವಿದೇಶಿ ಪ್ರವಾಸಿಗರ ಬಗ್ಗೆ ಮಾಹಿತಿಯನ್ನು ಒದಗಿಸಬೇಕು. ವಿದೇಶಗಳಿಂದ ಆಗಮಿಸುವವರ ಆರೋಗ್ಯ ತಪಾಸಣೆ ಕೈಗೊಂಡು, ಎರಡು ವಾರಗಳ ಕಾಲ ನಿಗಾ ವಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಹೊಟೇಲ್‍ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ಆಹಾರ ಸುರಕ್ಷತಾ ಅಧಿಕಾರಿಗಳು ಎಲ್ಲಾ ಹೊಟೇಲ್‍ಗಳಿಗೆ ಭೇಟಿ ನೀಡಿ ಸ್ವಚ್ಛತೆಗೆ ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸಬೇಕು. ಶಾಲೆಗಳಲ್ಲಿ ಕೈಯನ್ನು ಸರಿಯಾಗಿ ತೊಳೆಯುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನಿರಂತರವಾಗಿ ನೀಡಬೇಕು ಎಂದರು. ಮಾಹಿತಿ ಪೋಸ್ಟರ್ ಬಿಡುಗಡೆ :ಕರೋನಾ ವೈರಸ್ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್‍ಗಳನ್ನು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಅವರು ಬಿಡುಗಡೆ ಮಾಡಿದರು. ಡಿಎಚ್‍ಒ ಡಾ.ರಾಜೇಶ ಸುರಗಿಹಳ್ಳಿ, ಶಿಮ್ಸ್ ನಿರ್ದೇಶಕ ಡಾ.ಲೇಪಾಕ್ಷಿ, ಡಾ.ಕಿರಣ್ ಕುಮಾರ್, ಡಾ.ನಾಗರಾಜ್, ಡಾ.ಶಂಕ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!