ಶಿವಮೊಗ್ಗ, ಮಾರ್ಚ್ 21 : ಕರೋನಾ ವೈರಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ಗುರುತಿಸಿ ಅದರ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವುದು ಸೇರಿದಂತೆ ಕರೋನಾ ವೈರಸ್ ಬಗ್ಗೆ ಜನಜಾಗೃತಿ ಮೂಡಿಸಲು ನೇಮಕ ಮಾಡಲಾಗಿರುವ ಸ್ವಯಂ ಸೇವಕರಿಗೆ ಶನಿವಾರ ವಾರ್ತಾ ಭವನದಲ್ಲಿ ತರಬೇತಿ ಆಯೋಜಿಸಲಾಯಿತು.
ಭಾರತೀಯ ರೆಡ್ಕ್ರಾಸ್ ಸೊಸೈಟಿ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಕಾರ್ಮಿಕ ತರಬೇತಿ ಸಂಸ್ಥೆ ಸಹಯೋಗದಲ್ಲಿ ಕರೋನಾ ಯೋಧರು ಎಂಬ ಹೆಸರಿನಲ್ಲಿ ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದೆ. ರಾಜ್ಯ ಸರ್ಕಾರ ಕರೋನಾ ಹರಡುವಿಕೆ ತಡೆಯಲು ಹಾಗೂ ಅದರ ನಿಯಂತ್ರಣಕ್ಕೆ ಹಲವಾರು ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ. ಕರೋನಾ ವೈರಸ್ ಬಗ್ಗೆ ಹರಡುವ ವದಂತಿಗಳು ಹಾಗೂ ಅಪಪ್ರಚಾರಗಳನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸುವ ಉದ್ದೇಶದಿಂದ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ.
ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಬಯಸುವವರು https://covid19.karnataka.gov.in/coronawarrior.html ಮೂಲಕ ಆನ್ಲೈನ್ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ. ಜಿಲ್ಲಾ ವಾರ್ತಾಧಿಕಾರಿ ಶಫಿ ಸಾದುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಡಾ.ದಿನೇಶ್, ಡಾ.ಕುಮಾರ್ ವಿ.ಎಸ್.ಎಸ್ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟ ಕೃಷ್ಣಯ್ಯ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.