ವೀರ ರಾಣಿ ಕೆಳದಿ ಚೆನ್ನಮ್ಮಾಜಿಯ ಆದರ್ಶ ಪಾಲನೆಗೆ ಅಜಯಕುಮಾರ್ ಶರ್ಮಾ ಕರೆ

ಶಿವಮೊಗ್ಗ: ಬ್ರಿಟಿಷರ ವಿರುದ್ಧ ಹೋರಾಡಿದ ಕೆಲವೇ ಮಹಾರಾಣಿಯರ ಹೆಸರುಗಳು ಇತಿಹಾಸ ಪಠ್ಯದಲ್ಲಿ ಉಲ್ಲೇಖವಾಗಿದೆಯೇ ಹೊರತು ಪೋರ್ಚುಗೀಸರು, ಡಚ್ಚರು, ಇಂಗ್ಲೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಕೆಳದಿ ಚೆನ್ನಮ್ಮಾಜಿಯಂಥವರ ಹೆಸರೇ ಉಲ್ಲೇಖವಾಗದೇ ನಿರ್ಲಕ್ಷ್ಯಕ್ಕೊಳಗಾಗಿರುವುದು ಖೇದಕರ ಸಂಗತಿಯಾಗಿದೆ ಎಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯ ರಾಜ್ಯ ಕಮಿಟಿಯ ಸದಸ್ಯರಾದ ಅಜಯಕುಮಾರ ಶರ್ಮಾ ಅಭಿಪ್ರಾಯಪಟ್ಟರು.
ಅವರು ಇಂದು ಇಲ್ಲಿಯ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಇತಿಹಾಸ ವೇದಿಕೆ, ಭಾರತೀಯ ಇತಿಹಾಸ ಸಂಕಲನ ಸಮಿತಿಯ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಐಕ್ಯೂಎಸಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕೆಳದಿ ವೀರ ರಾಣಿ ಚೆನ್ಮಮ್ಮಾಜಿಯ 350ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡುತ್ತಿದ್ದರು.
ಹಲವು ಪ್ರಥಮಗಳ ರಾಣಿ ಕೆಳದಿ ಚೆನ್ನಮ್ಮಾಜಿಯಾಗಿದ್ದು, ದೇಶದಲ್ಲಿ ಸಹಗಮನ ಪದ್ಧತಿಯನ್ನು ವಿರೋಧಿಸಿದ್ದ ಮಹಿಳೆಯಾಗಿದ್ದಲ್ಲದೆ ಉಚಿತ ಶಿಕ್ಷಣ, ಅನ್ನದಾಸೋಹ, ಮಕ್ಕಳಿಗೆ ಉಚಿತ ಹಾಲು ವಿತರಣೆ ಇತ್ಯಾದಿಗಳನ್ನು ಜಾರಿಗೆ ತಂದವಳು ಚೆನ್ನಮ್ಮಾಜಿ ಆಗಿದ್ದಳು ಎಂದು ಅವರು ಅವಳ ಸಾಮಾಜಿಕ ಕಳಕಳಿಯನ್ನು ವಿವರಿಸಿದರು.
ಕೆಳದಿ ಕೇವಲ ರಾಜ್ಯವಾಗಿರದೆ ಅದೊಂದು ಸಾಮ್ರಾಜ್ಯವಾಗಿತು ಎಂದ ಅವರು ಕರಾವಳಿಯಲ್ಲಿರುವ ದೇವಾಲಯಗಳ ನಿರ್ಮಾಣ ಅಥವಾ ಅವುಗಳ ಅಭಿವೃದ್ಧಿಗಾಗಿ ಅಪಾರ ಕೊಡುಗೆ ನೀಡಿದ ರಾಣಿ ಕೆಳದಿ ಚೆನ್ನಮ್ಮಾಜಿ ಆಗಿದ್ದರು ಎಂದು ಅವರು ತಿಳಿಸಿದರು. ರಾಜ್ಯ ಸರ್ಕಾರ ಕೆಳದಿ ಚೆನ್ನಮ್ಮಾಜಿಯ ಪಟ್ಟಾಭಿಷೇಕ ಮಹೋತ್ಸವವನ್ನು ಪ್ರತಿ ವರ್ಷ ಮಾರ್ಚ 24ರಂದೇ ಆಚರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಯಾವ ರಾಜನ ವಿರುದ್ಧವೂ ಸೋಲನ್ನು ಕಾಣದ ಮೊಘಲ್ ದೊರೆ ಔರಂಗಜೇಬನನ್ನು ಸೋಲಿಸಿದ ವೀರ ರಾಣಿ ಚೆನ್ನಮ್ಮಾಜಿ ಎಂದ ಅವರು ಬಾಬಾಬುಡನಗಿರಿ, ಅದರ ಸಮೀಪದ ದೇವೀರಮ್ಮ ಗುಡ್ಡದ ದೇವಾಲಯಗಳ ನಿರ್ಮಾಣದಲ್ಲಿ ಚೆನ್ನಮ್ಮಾಜಿ ಪ್ರಮುಖ ಪಾತ್ರ ವಹಿಸಿದ್ದಳು ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಮೂಲ್ಯ ಶೋಧದ ಎಚ್.ಖಂಡೋಬರಾವ್ ಮಾತನಾಡಿ ಕ್ರಿ.ಪೂ.ದಲ್ಲಿಯೇ ಮಲೆನಾಡು ಪ್ರಸಿದ್ದಧಯಾಗಿತ್ತು. ಈ ನಾಡಿನಲ್ಲಿ ಅನೇಕ ರಾಜ ಮಹಾರಾಜರು ಆಳ್ವಿಕೆ ನಡೆಸಿದರೂ ಅವರು ಕೆಳದಿ ಅರಸರಷ್ಟು ಸುಧೀರ್ಘ ಕಾಲ ಆಳ್ವಿಕೆ ನಡೆಸಲಿಲ್ಲ. ಶಿಕ್ಷಣಕ್ಕೆ ಒತ್ತು ನೀಡಿದ ಕೆಳದಿ ಚೆನ್ನಮ್ಮಾಜಿಯ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ಡಾ.ಎಚ್.ಎಸ್.ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಎಂ.ಜಗದೀಶ, ಸಮಿತಿಯ ಜಿಲ್ಲಾಧ್ಯಕ್ಷ ನಿಧಿನ ಓಲಿಕರ, ಡಾ.ಓಂಕಾರಪ್ಪ ಉಪಸ್ಥಿತರಿದ್ದರು. ಸಮಿತಿಯ ರಾಜ್ಯ ಸಂಚಾಲಕ ಡಾ.ಬಾಲಕೃಷ್ಣ ಹೆಗಡೆ ಸ್ವಾಗತಿಸಿದರು. ಕು.ಪದ್ಮಾವತಿ ವಂದಿಸಿದರು. ನಾಗವೇಣಿ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕು.ಸತ್ಯವತಿ ಬಿ. ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಮಹಿಳಾ ಸಾಧಕಿಯರಾದ ಸಾಗರದ ವಸುಧಾ ಶರ್ಮಾ, ತೀರ್ಥಹಳ್ಳಿಯ ಗೀತಾ ಶೆಟ್ಟಿ ಹಾಗೂ ಹೊಸನಗರದ ರಾಜಶ್ರೀ ಎಸ್.ರಾವ್ ಅವರನ್ನು ಸನ್ಮಾನಿಸಲಾಯಿತು.

error: Content is protected !!