ಮುಟ್ಟಿನ ನೈರ್ಮಲ್ಯದ ಪ್ರಾಮುಖ್ಯತೆ ಮತ್ತು ಮುಟ್ಟಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವುದು ಹೇಗೆ ಮತ್ತು ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸಲು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆಯ ಮಹಿಳಾ ವೈದ್ಯರ ಘಟಕವು ಕಮಲಾ ನೆಹರು ಕಾಲೇಜಿನ ಸಹಯೋಗದಲ್ಲಿ ವಿಶ್ವ ಮುಟ್ಟಿನ ನೈರ್ಮಲ್ಯದ ದಿನವಾದ 28.5.2023 ರಂದು ಉಪನ್ಯಾಸ ಆಯೋಜಿಸಿತ್ತು . ಮುಟ್ಟಿನ ನೈರ್ಮಲ್ಯ ದಿನವನ್ನು ಪ್ರತಿ ವರ್ಷ ಮೇ 28 ರಂದು ಆಚರಿಸಲಾಗುತ್ತದೆ. ಯಾಕೆಂದರೆ ಮುಟ್ಟಿನ ಚಕ್ರವು ಸರಾಸರಿ 28 ದಿನಗಳು ಮತ್ತು ಮಹಿಳೆಯರಲ್ಲಿ ಪ್ರತಿ ತಿಂಗಳು ಐದು ದಿನಗಳವರೆಗೆ ಮುಟ್ಟು ಇರುತ್ತದೆ ಎಂದು ಡಾ . ಸ್ವಾತಿ ಕಿಶೋರ್ ಅವರು ತಿಳಿಸಿದರು . ಗರ್ಭಾಶಯವು ಅದರ ಒಳಪದರದಿಂದ ರಕ್ತವನ್ನು ಯೋನಿಯ ಮೂಲಕ ಚೆಲ್ಲುತ್ತದೆ. ಈ ರೀತಿಯ ಪ್ರಕ್ರಿಯೆ ಆದಾಗ ಒಂದು ಅವಧಿ ಯಾಗುತ್ತದೆ (ತಿಂಗಳು).ಮುಟ್ಟಿನ ನೈರ್ಮಲ್ಯ ಎಂದರೆ ಮುಟ್ಟಿನ ಸಮಯದಲ್ಲಿ ರಕ್ತದ ಹರಿವನ್ನು ಹೀರಿಕೊಳ್ಳುವ ಅಥವಾ ಸಂಗ್ರಹಿಸುವ ಉತ್ಪನ್ನಗಳ ಬಳಕೆಯಾಗಿದೆ. ಪ್ಯಾಡ್‌ಗಳು ಅಥವಾ ಮುಟ್ಟಿನ ಕಪ್‌ಗಳನ್ನು ಬದಲಾಯಿಸಲು ಗೌಪ್ಯತೆ ಮತ್ತು ಬಳಸಿದ ಉತ್ಪನ್ನಗಳನ್ನು ವಿಲೇವಾರಿ ಮಾಡುವ ಸೌಲಭ್ಯಗಳು ಮುಟ್ಟಿನ ನೈರ್ಮಲ್ಯದ ಭಾಗವಾಗಿದೆ ಎಂದು ಹೇಳಿದರು . 2030ರ ವೇಳೆಗೆ ಮುಟ್ಟನ್ನು ಜೀವನದ ಸಾಮಾನ್ಯ ಸಂಗತಿಯನ್ನಾಗಿ ಮಾಡುವುದು ಈ ವರ್ಷದ ಘೋಷ ವಾಕ್ಯ ಎಂದು ನೆರೆದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಹೇಳಿದರು .
ಪ್ರಶ್ನೋತ್ತರ ಕಾರ್ಯಕ್ರಮವನ್ನು ನಡೆಸಿಕೊಟ್ಟ ಮಹಿಳಾ ವೈದ್ಯರ ಘಟಕದ ಅಧ್ಯಕ್ಷರಾದ ಡಾ . ವಿನಯಾ ಶ್ರೀನಿವಾಸ್ ಹಾಗು ಐಎಂಎ ಕಾರ್ಯದರ್ಶಿಗಳಾದ ಡಾ . ರಕ್ಷಾ ರಾವ್ ಅವರು ಮಕ್ಕಳ ಸಾಕಷ್ಟು ಗೊಂದಲಗಳನ್ನು ಸಂವಾದದ ಮೂಲಕ ದೂರ ಮಾಡಿದರು . ಮುಟ್ಟಿನ ನೈರ್ಮಲ್ಯದ ಮಾರ್ಗ ಸೂಚಿಗಳನ್ನು ಎತ್ತಿ ಹಿಡಿಯಲಾಯಿತು . ಅವುಗಳು ಈ ಕೆಳಕಂಡಂತಿದೆ . ಮುಟ್ಟಿನ ಉತ್ಪನ್ನವನ್ನು ಬಳಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆಯಿರಿ.
ಮುಟ್ಟಿನ ಉತ್ಪನ್ನಗಳನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಬೇಡಿ. ಬದಲಿಗೆ ಅವುಗಳನ್ನು ಶೌಚಾಲಯದ ಪೇಪರ್ ಅಥವಾ ಹಳೆಯ ದಿನಪತ್ರಿಕೆಯಲ್ಲಿ ಸುತ್ತಿ ಕಸದ ಬಿನ್‌ನಲ್ಲಿ ವಿಲೇವಾರಿ ಮಾಡಿ.
ರಕ್ತದ ಹರಿವು ಕಡಿಮೆಯಾಗಿದ್ದರೂ ಪ್ರತಿ ಕೆಲವು ಗಂಟೆಗಳಿಗೊಮ್ಮೆ ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕು. ಹರಿವು ಭಾರೀ ಪ್ರಮಮಾಣಲ್ಲಿದ್ದರೆ ಅವುಗಳನ್ನು ಹೆಚ್ಚಾಗಿ ಪ್ರತಿ 4-8 ಗಂಟೆಗಳಿಗೊಮ್ಮೆ ಬದಲಾಯಿಸಿ.
ಋತುಚಕ್ರದ ಕಪ್‌ಗಳ ಸಂದರ್ಭದಲ್ಲಿ ಒಂದು ದಿನದ ಬಳಕೆಯ ನಂತರ ಅವುಗಳನ್ನು ಸ್ವಚ್ಛಗೊಳಿಸಿ ಮತ್ತು ನಿಮ್ಮ ಅವಧಿ ಮುಗಿ ನಂತರ ಕೆಲವು ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಇರಿಸಿ , ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಿ.
ಹತ್ತಿ ಒಳಉಡುಪುಗಳನ್ನು ಧರಿಸಿ ಮತ್ತು ನಿಮ್ಮ ಜನನಾಂಗದ ಪ್ರದೇಶವನ್ನು ಸ್ವಚ್ಛವಾಗಿಡಿ. ಜಲಸಂಚಯನ ಮಟ್ಟವನ್ನು ಕಾಪಾಡಿಕೊಳ್ಳಲು ಸಾಕಷ್ಟು ದ್ರವನ್ನು ಕುಡಿಯಿರಿ.
ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಗೆ ಮುಟ್ಟಿನ ನೈರ್ಮಲ್ಯದ ಉತ್ಪನ್ನಗಳನ್ನು ವಿತರಿಸಲಾಯಿತು . ಕಮಲಾ ನೆಹರು ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಮಮತಾ ಅವರು ಉಪಸ್ಥಿತರಿದ್ದರು .