ಶಿವಮೊಗ್ಗ: ಇತ್ತೀಚಿಗೆ ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಉದ್ಯಮಿಗಳು, ಸೈಬರ್ ವಂಚನೆಗೊಳಗಾಗುತ್ತಿದ್ದಾರೆ. ಅಪಾರ ಪ್ರಮಾಣದ ಹಣ ಕಳೆದುಕೊಳ್ಳುತ್ತಿರುವ ಮಾಹಿತಿಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಆನ್’ಲೈನ್ ಆಧಾರಿತ ವಹಿವಾಟು ನಡೆಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಎನ್. ಗೋಪಿನಾಥ್ ಅವರು ಉದ್ಯಮಿಗಳಿಗೆ ಕಿವಿಮಾತು ಹೇಳಿದ್ದಾರೆ.
ಉದ್ಯಮಿಗಳು ಆನ್ಲೈನ್ ಆಧಾರಿತ ವ್ಯವಹಾರ ನಡೆಸುವಾಗ ಬಹಳ ಎಚ್ಚರಿಕೆಯಿಂದಿರಬೇಕು. ಯಾವುದೇ ಕಾರಣಕ್ಕೂ ಅನಾಮಧೇಯ ವ್ಯಕ್ತಿಗಳು ಕಳಿಸುವ ಸಂದೇಶಗಳಿಗೆ ಪ್ರತಿಕ್ರಿಯಿಸುವ ವೇಳೆ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.
ಈಗಾಗಲೇ ಶಿವಮೊಗ್ಗ ನಗರದಲ್ಲಿ ಹಲವು ವರ್ತಕರು ಸೈಬರ್ ವಂಚಕರಿಂದ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಆದರೆ ಕೆಲ ವರ್ತಕರು ಈ ಕುರಿತಂತೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗದಿರುವ ಮಾಹಿತಿಯೂ ಕೇಳಿಬರುತ್ತಿದೆ.
ಸೈಬರ್ ವಂಚಕರಿಂದ ಮೋಸಹೋದ ವರ್ತಕರು ತಕ್ಷಣವೇ ಈ ಕುರಿತಂತೆ ಸೈಬರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ವಂಚನೆಗೊಳಗಾದ ವರ್ತಕರಿಗೆ ಸಂಘಟನೆಯು ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.
ಉದ್ಯಮ ವಲಯದಲ್ಲಿ ಹೆಚ್ಚುತ್ತಿರುವ ಸೈಬರ್ ವಂಚನೆ ಕುರಿತಂತೆ ವರ್ತಕ ವಲಯದಲ್ಲಿ ಜನಜಾಗೃತಿ ಮೂಡಿಸಲು ಸಂಘ ಕ್ರಮಕೈಗೊಂಡಿದೆ. ಇಷ್ಟರಲ್ಲಿಯೇ ಸೈಬರ್ ಪೊಲೀಸ್ ಠಾಣೆ ಸಹಯೋಗದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಸಂಘಟನೆ ಹಮ್ಮಿಕೊಳ್ಳಲಿದೆ ಎಂದು ಎನ್.ಗೋಪಿನಾಥ್ ಹೇಳಿದ್ದಾರೆ.