ಶಿವಮೊಗ್ಗ. ಮೇ 24 : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರು ಪಾಲಿಕೆಗೆ ಕೇವಲ ಉದ್ದಿಮೆ ಪರವಾನಿಗೆ ಶುಲ್ಕವನ್ನು ಮಾತ್ರ ಪಾವತಿಸಿ 2019ರ ಏಪ್ರಿಲ್ 01ರಿಂದ ಅನ್ವಯವಾಗುವಂತೆ ಉದ್ದಿಮೆ ಪರವಾನಿಗೆಯನ್ನು ಪಡೆಯಬಹುದಾಗಿದೆ ಎಂದು ಮಹಾನಗರಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿನೂತನ ಯೋಜನೆಯ ಅನುಷ್ಟಾನದಿಂದಾಗಿ ವ್ಯಾಪಾರಸ್ಥರು ನಿಗಧಿಪಡಿಸಿದ ಕನಿಷ್ಠ ಶುಲ್ಕ ಪಾವತಿಸಿ ಪರವಾನಿಗೆ ಪಡೆಯಬಹುದಾಗಿದೆ. ಇದು ಉದ್ಯಮಿಗಳಿಗೆ ಸಹಕಾರಿಯಾಗಲಿದೆ ಎಂಬ ಆಶಯ ಹೊಂದಿರುವುದಾಗಿ ತಿಳಿಸಿರುವ ಅವರು, ಈ ಹಿಂದೆ 2014ನೇ ಸಾಲಿನಿಂದ ಉದ್ದಿಮೆ ಪರವಾನಿಗೆ ಶುಲ್ಕದೊಂದಿಗೆ ಘನತ್ಯಾಜ್ಯ ಸೇವಾ ಶುಲ್ಕ ಸೇರಿಸಿ ಮೊತ್ತವನ್ನು ಉದ್ದಿಮೆದಾರರಿಂದ ಸ್ವೀಕರಿಸಿದ ನಂತರ ಉದ್ದಿಮೆ ಪರವಾನಿಗೆಯನ್ನು ನೀಡಲಾಗುತ್ತಿತ್ತು. ಅದನ್ನು ಸರಳಗೊಳಿಸಿ ಅನುಷ್ಠಾನಕ್ಕೆ ತರಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಹಿಂದೆ ಪರವಾನಿಗೆ ನೀಡುವ ಬಗ್ಗೆ ವಸೂಲು ಮಾಡಲಾಗುತ್ತಿದ್ದ ಶುಲ್ಕದ ಬಗ್ಗೆ ಅನೇಕ ಸಂಘ ಸಂಸ್ಥೆಗಳು ಹಾಗೂ ಉದ್ದಿಮೆದಾರರು ಆಕ್ಷೇಪಣೆಯನ್ನು ಸಲ್ಲಿಸಿದ್ದರು. ಘನತ್ಯಾಜ್ಯ ಸೇವಾ ಶುಲ್ಕವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡದೇ ಕಾನೂನು ರೀತ್ಯಾ ಉದ್ದಿಮೆ ಪರವಾನಿಗೆ ಪಡೆಯಲು ಬಂದಂತಹವರಿಂದ ಶುಲ್ಕ ವಸೂಲಿ ಮಾಡದಂತೆ ಮನವಿಗಳನ್ನು ಮಹಾಪೌರರು ಹಾಗೂ ಆಯುಕ್ತರುಗಳಿಗೆ ಸಲ್ಲಿಸಿದ್ದರು. ಇದಕ್ಕೆ ಅನುಗುಣವಾಗಿ 2019 ಫೆಬ್ರವರಿ 20ರ ಪಾಲಿಕೆ ಸಭೆಯಲ್ಲಿ ಚರ್ಚಿಸಲಾಗಿ 2014 ರಿಂದ 2018ರ ವರೆಗೆ ಪ್ರತಿ ವರ್ಷ ಪರವಾನಿಗೆ ಪಡೆಯುವ ಉದ್ದಿಮೆಗಳ ಸಂಖ್ಯೆ ಕೇವಲ 1500 ಅಥವಾ ಅದಕ್ಕಿಂತ ಕಡಿಮೆಯಿರುವುದನ್ನು ಗುರುತಿಸಲಾಗಿದೆ. ವಾಸ್ತವದಲ್ಲಿ ಶಿವಮೊಗ್ಗ ನಗರದಲ್ಲಿ ಅಂದಾಜು 15000ಕ್ಕೂ ಮೇಲ್ಪಟ್ಟು ಉದ್ದಿಮೆಗಳಿದ್ದು, ಅವುಗಳಲ್ಲಿ ಶೇ10ರಷ್ಟು ಉದ್ದಿಮೆದಾರರು ಮಾತ್ರ ಪರವಾನಗಿ ಪಡೆದು ಕಾನೂನಾತ್ಮಕವಾಗಿ ಉದ್ದಿಮೆ ನಡೆಸುತ್ತಿದ್ದಾರೆ. ಪರವಾನಿಗೆ ಪಡೆಯದೇ ಉದ್ದಿಮೆ ನಡೆಸುವುದು ಕೂಡ ಕಾನೂನಿಗೆ ವಿರುದ್ಧವಾದುದಾಗಿದೆ. ಅಲ್ಲದೇ ಇವರುಗಳಿಂದಲೇ ಮಾತ್ರ ಘನತ್ಯಾಜ್ಯ ಸೇವಾ ಶುಲ್ಕವನ್ನು ಸಂಗ್ರಹಿಸುವುದು ಸರಿಯಾದ ಕ್ರಮವಲ್ಲ ಎಂಬುದನ್ನು ಅರಿತು ಉದ್ದಿಮೆ ಪರವಾನಿಗೆಯಲ್ಲಿ ಸುಧಾರಣ ಕ್ರಮವಾಗಿ ದಿನಾಂಕ: 01.04.2019 ರಿಂದ ಜಾರಿಗೆ ಬರುವಂತೆ ಘನತ್ಯಾಜ್ಯ ಸೇವಾ ಶುಲ್ಕವನ್ನು ಉದ್ದಿಮೆ ಪರವಾನಿಗೆಯಿಂದ ಕೈ ಬಿಡುತ್ತಾ ಘನತ್ಯಾಜ್ಯ ಸೇವಾ ಶುಲ್ಕವನ್ನು ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ವಸೂಲಿ ಮಾಡಲು ತೀರ್ಮಾನಿಸಲಾಗಿದೆ. ಈ ಕಾರಣಗಳಿಂದಾಗಿ ಉದ್ದಿಮೆದಾರ ಸ್ನೇಹಿಯಾಗಿರುವಂತೆ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವ್ಯವಹಾರ ಮಾಡುವ ಉದ್ದಿಮೆದಾರರು ಈ ಸುಧಾರಣ ಕ್ರಮದ ಸದುಪಯೋಗ ಪಡೆದುಕೊಂಡು ನಗರದ ಎಲ್ಲಾ ಉದ್ದಿಮೆದಾರರು ತಮ್ಮ ತಮ್ಮ ಉದ್ದಿಮೆಗಳಿಗೆ ಪಾಲಿಕೆಯಿಂದ ಉದ್ದಿಮೆ ಪರವಾನಿಗೆಯನ್ನು ಪಡೆದು ಕಾನೂನು ಪಾಲಿಸುವಂತೆ ಮಹಾನಗರಪಾಲಿಕೆಯ ಆಯುಕ್ತೆ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.