ಹೊಳೆಹೊನ್ನೂರು : ದೇವಾಲಯಗಳಲ್ಲಿ ದೇವರು ಹೇಗೆ ಇದ್ದಾನೋ ಹಾಗೆ ದೇವಕಿಯ ಉದರ ಶ್ರೀಕೃಷ್ಣಗೆ ಗರ್ಭಗೃಹ ಅಷ್ಟೇ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಸಂಜೆ ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಅನುಗ್ರಹ ಸಂದೇಶ ನೀಡಿದರು.
ದೇವರಿಗೆ ನಿದ್ರೆಯೂ ಇಲ್ಲ, ಶ್ರಮವೂ ಇಲ್ಲ, ದುಃಖವೂ ಇಲ್ಲ. ಭಕ್ತಿ, ಪೂರ್ಣ ಜ್ಞಾನ ಮತ್ತು ನಿಜವಾದ ವೈರಾಗ್ಯದಿಂದ ದೇವರ ಸ್ಮರಣೆ ಮಾಡಿದರೆ ಸಾಕು ನಮಗೆ ಗರ್ಭವಾಸದ ದುಃಖವೇ ನಾಶವಾಗುತ್ತದೆ ಎಂದಾದರೆ ಅಂತಹ ಪರಮಾತ್ಮನಿಗೆ ಗರ್ಭವಾಸದ ದುಃಖ ಇರಲು ಸಾಧ್ಯವೇ? ಎಂದು ಸ್ವಾಮಿಗಳು ಹೇಳಿದರು.
ದೈತ್ಯರ ಸಂಹಾರ ಮತ್ತು ಸಜ್ಜನರ ರಕ್ಷಣೆಗಾಗಿ ದೇವರು ಅನೇಕ ರೂಪ ಪಡೆದಿದ್ದಾನೆ. ವರಾಹ, ನಾರಸಿಂಹ ಅವತಾರಗಳ ಮೂಲಕ ಭಕ್ತರಿಗಾಗಿ ನಾನು ಎಂತಹ ರೂಪವನ್ನಾದರೂ ಪಡೆಯಬಲ್ಲೆ ಎಂಬುದನ್ನು ಸಾಬೀತು ಮಾಡಿದ್ದಾನೆ. ಇಂತಹ ಭಗವಂತನ ದಿವ್ಯವಾದ, ಮಂಗಳಮಯವಾದ ವಿಚಾರದಲ್ಲಿದ್ದರೆ ನಾವು ಸಂಸಾರ ಎಂಬ ನೌಕೆಯನ್ನು ಸುಲಭವಾಗಿ ದಾಟಬಹುದು ಎಂದರು.
ಪಂಡಿತರಾದ ಅಂಬರೀಷಾಚಾರ್ಯ, ಕಪಿಲಾಚಾರ್ಯ ಗಲಗಲಿ, ಸಂಜೀವಾಚಾರ್ಯ ಬುರಲಿ, ಅಜಿತಾಚಾರ್ಯ ಹೊನಗಂಡಿ ಪ್ರವಚನ ನೀಡಿದರು. ಶ್ರೀಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ಪ್ರಕಾಶಾಚಾರ್ ಸವಣೂರು ಮೊದಲಾದವರಿದ್ದರು.

ಹರಿದಾಸರ ಉಪಕಾರ ಅನನ್ಯ: ಸತ್ಯಾತ್ಮ ಶ್ರೀ
ಹೊಳೆಹೊನ್ನೂರು : ದೇವರನ್ನು ಒಲಿಸಿಕೊಳ್ಳಲು ಹರಿನಾಮ ಸಂಕೀರ್ತನೆ ಅತ್ಯಂತ ಸುಲಭವಾದ ಮಾರ್ಗ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥರು ಹೇಳಿದರು.
ಹರಿದಿನದಂದು ಹರಿದಾಸ ಲಹರಿ ನಿರಂತರ ದೇವರನಾಮ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಸಾಮಾನ್ಯರೂ ಕೂಡ ಅರ್ಥ ಮಾಡಿಕೊಳ್ಳುವಂತೆ ದಾಸರು ದೇವರ ಮಹಿಮೆಯನ್ನು ವರ್ಣಿಸಿದ್ದಾರೆ. ವ್ಯಾಸ ಸಾಹಿತ್ಯದ ಕನ್ನಡೀಕರಣವೇ ದಾಸ ಸಾಹಿತ್ಯವಾಗಿದೆ. ಶಾಸದಲ್ಲಿರುವ ದೊಡ್ಡ ದೊಡ್ಡ ಪ್ರಮೇಯಗಳನ್ನು ದಾಸರು ಸರಳವಾಗಿ ವಿವರಿಸಿ ಬಹಳ ದೊಡ್ಡ ಉಪಕಾರ ಮಾಡಿದ್ದಾರೆ ಎಂದರು.
ಇಂತಹ ದೇವರನಾಮಗಳನ್ನು ನಾವು ನಿತ್ಯವಾಗಿ ಮನೆಗಳಲ್ಲಿ ಹಾಡಬೇಕು. ಹರಿದಿನಗಳಲ್ಲಿ ಹಾಡಿದರಂತೂ ವಿಶೇಷ ಫಲವಿದೆ. ಮಕ್ಕಳಿಗೂ ಈ ಸಂಸ್ಕಾರ ಕಲಿಸಬೇಕು ಎಂದರು.
ಬೆಳಗ್ಗೆ 9 ರಿಂದ ರಾತ್ರಿ 11ರವರೆಗೆ ನಿರಂತರ ಹರಿನಾಮ ಸಂಕೀರ್ತನೆ ವಿವಿಧ ಕಲಾವಿದರಿಂದ ನಡೆಯಿತು.

:ಶ್ರೀ ಸತ್ಯಾತ್ಮ ತೀರ್ಥರ ಸುವರ್ಣ ಧರ್ಮ ಚಾತುರ್ಮಾಸದಲ್ಲಿ ಶ್ರೀ ಜಯವರ್ಯ ಸಭಾ ಮಂಟಪದಲ್ಲಿ ಶನಿವಾರ ನಡೆದ ಹರಿದಿನದಂದು ಹರಿದಾಸ ಲಹರಿಯಲ್ಲಿ ಶ್ರೀನಿವಾಸ ಹಂಪಿಹೊಳಿ ಮತ್ತು ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!