ಈರುಳ್ಳಿ ನಮ್ಮ ರಾಜ್ಯದ ಮುಖ್ಯವಾದ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ಇದನ್ನು ತರಕಾರಿಯಂತೆಯೂ, ಸಾಂಬಾರು ಪದಾರ್ಥದಂತೆಯೂ ಬೆಳೆಯ ಎಲ್ಲಾ ಹಂತದಲ್ಲಿ ಉಪಯೋಗಿಸಲಾಗುವುದು. ಉತ್ತರ ಕರ್ನಾಟಕದಲ್ಲಿ ಮುಖ್ಯವಾಗಿ ಬಾಗಲಕೋಟ, ವಿಜಯಪುರ, ಚಿತ್ರದುರ್ಗ, ಧಾರವಾಡ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಈರುಳ್ಳಿಯನ್ನು ಮುಖ್ಯ ಬೆಳೆಯಾಗಿಯೂ ಹಾಗೂ ಇತರ ಬೆಳೆಗಳ ಜೊತೆ ಮಿಶ್ರ ಬೆಳೆಯಾಗಿಯೂ ಬೆಳೆಯಲಾಗುತ್ತಿದೆ. ಈ ಬೆಳೆಯನ್ನು ಹಲವಾರು ಬಗೆಯ ಮಣ್ಣುಗಳಲ್ಲಿ ಬೆಳೆಯಬಹುದು. ಆದರೆ ನೀರು ಬಸಿದು ಹೋದುವಂತಹ ಮರಳು ಮಿಶ್ರಿತ ಗೋಡು ಮಣ್ಣು ಸೂಕ್ತ. ಉಳ್ಳಾಗಡ್ಡಿಯನ್ನು ವರ್ಷದ ಎಲ್ಲಾ ಕಾಲಗಳಲ್ಲಿಯೂ ಬೆಳೆಯಬಹುದು.ಈಬೆಳೆಯನ್ನು ಪ್ರಾರಂಭ ಮಾಡಲು ಜೂನ್- ಜುಲೈ, ಸೆಪ್ಟೆಂಬರ್ –ಅಕ್ಟೋಬರ್ ಮತ್ತು ಜನವರಿ -ಫೆಬ್ರವರಿ ತಿಂಗಳಗಳು ಉತ್ತಮ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಶೇ.50 ರಷ್ಟು ಬಾಗಿದಾಗ ಕಟಾವು ಮಾಡಬೇಕು. ಗಡ್ಡೆಗಳನ್ನು ಅಗೆದು ಬಿಸಿಲಿನಲ್ಲಿ ಒಂದು ವಾರ ಒಣಗಿಸಬೇಕು. ಪ್ರತಿ ಎಕರೆಗೆ ಸರಾಸರಿ 10,000 ರಿಂದ 12,000 ಕಿ.ಗ್ರಾಂ. ಗಡ್ಡೆಗಳ ಇಳುವರಿಯನ್ನು ಪಡೆಯಬಹುದು.
ಶೇಖರಣೆ : ಈರುಳ್ಳಿಯನ್ನು ಬಿದಿರಿನಿಂದ ಮಾಡಿದ ವಿಶೇಷ ಮನೆಗಳಲ್ಲಿ ಶೇಖರಣೆ ಮಾಡವುದು ಸೂಕ್ತ. ಈ ಮನೆಗಳ ಗೋಡೆ ಬದಿ ಮತ್ತು ತಳಭಾಗ ಬಿದಿರಿನಿಂದ ರಚಿಸಿದ್ದು, ತಳಭಾಗ ಭೂಮಿಯಿಂದ 45 ಸೆಂ.ಮೀ. ಎತ್ತರದಲ್ಲಿರುವುದು. ಈ ಮನೆಗಳ ಮೇಲೆ ಟೈಪಾ ಹುಲ್ಲಿನ ಹೊದಿಕೆ ಇರುವುದು. ಈ ಮನೆಗಳ ಸುತ್ತಲೂ ಅಲ್ಲದೇ ತಳಭಾಗದಲ್ಲಿ ಉತ್ತಮ ಗಾಳಿಯಾಡುವುದು. ಇಲ್ಲಿ ಚೆನ್ನಾಗಿ ಒಣಗಿದ ಈರುಳ್ಳಿಯನ್ನು ಶೇಖರಣೆ ಮಾಡುವುದರಿಂದ ಮೂರು ತಿಂಗಳವರೆಗೆ ಕೊಯ್ಲೋತ್ತರ ನಷ್ಟವನ್ನು ಕನಿಷ್ಟ ಮಟ್ಟದಲ್ಲಿ ಇಡಬಹುದು.
ಈರುಳ್ಳಿಗಳ ಸಿಪ್ಪೆ ಮತ್ತು ಬೇರುಗಳನ್ನು ಬೇರ್ಪಡಿಸಿ, ತುಂಡರಿಸುವ ಯಂತ್ತದ ಸಹಾಯದಿಂದ 3ರಿಂದ 5 ಮೀ.ಮೀ. ದಪ್ಪವಿರುವಂತೆ ಕತ್ತರಿಸಿ, ಶೇ. 0.2 (ಪೋಟ್ಯಾಸಿಯಂ ಮೆಟಾ ಬೈಸಲ್ಫೆಟ್ )ದ್ರಾವಣದಲ್ಲಿ 15 ನಿಮಿಷಗಳವರೆಗೆ ನೆನೆಸಿ ತೆಗೆಯಬೇಕು. ಈ ರೀತಿ ಉಪಚರಿಸಿದ ಈರುಳ್ಳಿ ತುಂಡುಗಳನ್ನು ಸೌರ ಶಾಖಾ ಪೆಟ್ಟಿಗೆಯಲ್ಲಿ 15 ರಿಂದ 16 ಗಂಟೆಗಳವರೆಗೆ ಅಥವಾ ಆಧ್ರ್ರತರಹಿತ ಗಾಳಿಯಿಂದ ಒಣಗಿಸುವ ಯಂತ್ರದಲ್ಲಿ 8 ರಿಂದ 10 ಗಂಟೆಗಳವರೆಗೆ (ಶೇ. 5 ರಿಂದ 6 ತೇವಾಂಶ ಬರುವವರೆಗೆ) ಒಣಗಿಸಬೇಕು. ಒಣಗಿದ ಈರುಳ್ಳಿ ತುಂಡುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಶೇಖರಿಸಿ 6 ರಿಂದ 9 ತಿಂಗಳುಗಳವರೆಗೆ ಉಪಯೋಗಿಸಬಹುದು ಅಥವಾ ದೇಶೀಯ ಮತ್ತು ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಉತ್ತಮ ಲಾಭ ಗಳಿಸಬಹುದು.
,ಡಾ|| ಬಿಂಧು ಮತ್ತು ಜಹೀರ್ ಅಹಮದ್ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು : Mobile No: 98453 00326