ಶಿವಮೊಗ್ಗ : ಅಕ್ಟೋಬರ್ 25 : ಗ್ರಾಮೀಣ ಜನರ ಆರೋಗ್ಯ, ಮನೋವಿಕಾಸ, ಸಾಮಾಜಿಕ ಬೆಳವಣಿಗೆ, ಸಮುದಾಯದ ಅಭಿವೃಧ್ಧಿ, ಆರ್ಥಿಕ ಪ್ರಗತಿ, ಪರಿಸರ ಅಭಿವೃದ್ಧಿ, ಸಾಮಾಜಿಕ ಭದ್ರತೆ ಇಂತಹ ಮಹೋನ್ನತ ಆದರ್ಶಗಳನ್ನು ಹೊಂದಿರುವ ಪ್ರಧಾನಮಂತ್ರಿ ಆದರ್ಶಗ್ರಾಮ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ಶ್ರಮಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿಗಳ ಆದರ್ಶಗ್ರಾಮ ಯೋಜನೆಯ ಅನುಷ್ಠಾನಕ್ಕಾಗಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಭವ್ಯ ಭಾರತದ ನಿರ್ಮಾಣ ಗ್ರಾಮೋದ್ಧಾರದಿಂದಲೇ ಆಗಬೇಕೆಂಬ ಆಶಯದಿಂದ ರೂಪಿಸಲಾಗಿರುವ ಈ ಯೋಜನೆಯಡಿ ಗ್ರಾಮ ಪಂಚಾಯಿತಿಗಳ ಉತ್ತಮ ಆಡಳಿತ, ಹಳ್ಳಿಗಳಿಗೆ ಬೇಕಾದ ಮೂಲಸೌಲಭ್ಯ ಮತ್ತು ಸೇವೆ ಒಳಗೊಂಡಂತೆ ಗ್ರಾಮದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿ ಮಾದರಿ ಗ್ರಾಮವನ್ನಾಗಿ ಪರಿವರ್ತಿಸುವ ಉದ್ಧೇಶ ಹೊಂದಲಾಗಿದೆ ಎಂದವರು ನುಡಿದರು.
ಈ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಘನತ್ಯಾಜ್ಯ ವಿಲೇವಾರಿ, ಶಾಲೆ-ಅಂಗನವಾಡಿ ಕೇಂದ್ರಗಳಲ್ಲಿನ ಶೌಚಾಲಯಗಳ ದುರಸ್ತಿ, ನೂತನ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಸೋಲಾರ್ ಹಾಗೂ ಬೀದಿದೀಪಗಳಂತ ತುರ್ತು ಅಗತ್ಯ ಹಾಗೂ ಶಾಶ್ವತ ಕಾಮಗಾರಿಗಳಿಗಾಗಿ ಅನುದಾನವನ್ನು ಬಳಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಈ ಯೋಜನೆಯಡಿ ಈಗಾಗಲೆ ಜಿಲ್ಲೆಯ ಎಲ್ಲಾ ತಾಲೂಕುಗಳನ್ನೊಳಗೊಂಡ ಆಯ್ದ 10ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಪ್ರತಿ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗಾಗಿ 20ಲಕ್ಷ ರೂ.ಗಳನ್ನು ಹಾಗೂ 1ಲಕ್ಷ ನಿರ್ವಹಣ ವೆಚ್ಚವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಪ್ರಸ್ತುತ ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು 37.50ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದವರು ನುಡಿದರು.
ಈ ಯೋಜನೆಯಡಿ ಶಿವಮೊಗ್ಗ ತಾಲೂಕಿನ ಮಂಡೇನಕೊಪ್ಪ, ಕುಂಚೇನಹಳ್ಳಿ ಮತ್ತು ನಾಗತಿಬೆಳಗಲು, ಶಿಕಾರಿಪುರ ತಾಲೂಕಿನ ಮಂಚಿಕೊಪ್ಪ, ತಾಳಗುಂದ, ಹೊಸೂರು, ನಳ್ಳಿನಕೊಪ್ಪ, ಹಾರೋಗೊಪ್ಪ ಮತ್ತು ಸಾಲೂರು, ಸೊರಬ ತಾಲೂಕಿನ ತತ್ತೂರು ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಅಕ್ಟೋಬರ್ 26ರೊಳಗಾಗಿ ಕ್ರಿಯಾಯೋಜನೆಯನ್ನು ರೂಪಿಸಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸುವಂತೆ ಹಾಗೂ ಈ ಕ್ರಿಯಾ ಯೋಜನೆಯನ್ನು ಮುಂದಿನ 15ದಿನಗಳೊಳಗಾಗಿ ಪರಿಶೀಲಿಸಿ ಅನುಮೋದನೆ ನೀಡುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!