ಶಿವಮೊಗ್ಗ : ವಿದ್ಯಾರ್ಥಿಗಳನ್ನು ಆಟ-ಪಾಠ ಎರಡೂ ವಿಷಯಗಳಲ್ಲಿ ಸಮನಾಗಿ ಪ್ರೋತ್ಸಾಹಿಸಬೇಕೆಂದು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ನಗರದ ಗುರುಪುರ ಬಡಾವಣೆಯಲ್ಲಿರುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಬಿಜಿಎಸ್ ಶಾಲೆಯ ಕ್ರೀಡಾಂಗಣದಲ್ಲಿ ನಡೆದ ಪೋಷಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಒಂದು ವಿಷಯದಲ್ಲಿ ಮಾತ್ರ ಮಕ್ಕಳನ್ನು ಪ್ರೋತ್ಸಾಹಿಸಿದರೆ ಸಾಲದು, ಮಗುವಿನ ಸರ್ವತೋಮುಖ ಬೆಳವಣಿಗೆಗೆ ಆಟ-ಪಾಠ ಎರಡೂ ಕೂಡ ಸಮನಾಗಿ ಬೇಕಾಗುತ್ತದೆ ಎಂದು ಹೇಳಿದರು.
ಮಗು ಯಾವ ವಿಷಯದಲ್ಲಿ ಆಸಕ್ತಿ ಹೊಂದಿರುತ್ತದೆಯೋ, ಆ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ದುರಂತವೆಂದರೆ ನಮ್ಮ ಪೋಷಕರು ತಮ್ಮ ಮನದ ಆಸೆಯನ್ನು ಮಗುವಿನ ಮೇಲೆ ಹೇರುತ್ತಿದ್ದಾರೆ. ಇದರಿಂದ ಮಗು ತನ್ನ ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಶಿಕ್ಷಕರೂ ಕೂಡ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಲವು ಮಕ್ಕಳು ಆಟ-ಪಾಠ ಎರಡರಲ್ಲಿಯೂ ಆಸಕ್ತಿಯನ್ನು ತೋರುವುದಿಲ್ಲ. ಅಂತಹ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಆ ಮಗುವಿನಲ್ಲಿ ಆಸಕ್ತಿಯನ್ನು ಕೆರಳಿಸಬೇಕು, ಅದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ ಎಂದ ಅವರು, ಪ್ರತಿಯೊಂದು ಮಗುವಿನಲ್ಲಿಯೂ ಕೂಡ ತನ್ನದೇ ಆದ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ತೆಗೆಯುವಂತಹ ಕಾರ್ಯ ಮಾಡಬೇಕಾದದ್ದು, ಎಲ್ಲರ ಜವಾಬ್ದಾರಿ ಎಂದರು.
ಪ್ರತಿಯೊಬ್ಬ ಪೋಷಕರೂ ಸಹ ತಮ್ಮ ಮಗು ರ‍್ಯಾಂಕ್ ಬಂದರೆ ಸಾಕು ಎಂಬ ಗುರಿಯನ್ನು ಹೊಂದಿರುತ್ತಾರೆ. ರ‍್ಯಾಂಕ್ ಬರುವುದರಿಂದ ಮಗು ತನ್ನ ಜೀವನವನ್ನು ಭದ್ರ ಮಾಡಿಕೊಂಡಂತಾಗುತ್ತದೆ. ಆದರೆ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಿದರೆ ನಿಮ್ಮ ಮಕ್ಕಳು ವಿಶ್ವದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಾರೆ. ಅದರ ಹಿರಿಮೆ ನಿಮಗೆ ಸಲ್ಲುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ, ಆ ಮೂಲಕ ವಿಶ್ವದಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರಿಸಲು ಕೈಜೋಡಿಸಿ ಎಂದು ಕಿವಿ ಮಾತು ಹೇಳಿದರು.
ಪ್ರಧಾನ ಮಂತ್ರಿಯಾದರೂ ಸಹ ದೇಶಕ್ಕೆ ಸೀಮಿತರಾಗುತ್ತಾರೆ. ಒಬ್ಬ ಕ್ರೀಡಾಪಟು ವಿಶ್ವದ ಆಸ್ತಿಯಾಗುತ್ತಾನೆ. ಇದರ ಸೂಕ್ಷ್ಮತೆಯನ್ನು ಪ್ರತಿಯೊಬ್ಬರೂ ಕೂಡ ಅರಿಂiiಬೇಕಾಗಿದೆ ಎಂದ ಅವರು, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಭಾರತ ರತ್ನ ಪ್ರಶಸ್ತಿಗೂ ಕೂಡ ಭಾಜನರಾಗುವ ಅವಕಾಶವಿದೆ ಎಂದು ಹೇಳಿದರು.
ಕಾರ್ಯಕ್ರಮ ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಸದ್ಗುರು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕರಗಳಾದ ಹಿರಣ್ಣಯ್ಯ ಹೆಗಡೆ ಅವರು, ವಾಸಪ್ಪ ಗೌಡ ಅವರು, ಸತೀಶ್ ಡಿ.ವಿ ಅವರು, ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಖ್ಯೋಪಾಧ್ಯರಾದ ರಮೇಶ್ ರವರು, ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗುರುಪುರ ಪ್ರಾಂಶುಪಾಲರಾದ ಸುರೇಶ್ ರವರು ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ಈ ಕ್ರೀಡಾಕೂಟ ಪೋಷಕರಿಗಾಗಿ ನಡೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ನಿಮ್ಮನ್ನು ನಿಮ್ಮ ಮಕ್ಕಳು ಪ್ರೋತ್ಸಾಹಿಸುತ್ತಿದ್ದಾರೆ. ಸೋತವರಿಗೆ ಮುಂದಿನ ಬಾರಿ ಗೆಲ್ಲುವ ಧೈರ್ಯ ಹೆಚ್ಚಾದರೆ. ಗೆದ್ದವರಿಗೆ ಮುಂದಿನ ಬಾರಿ ಗೆಲ್ಲಲೇಬೇಕೆಂಬ ಭಯ ಉಂಟಾಗುತ್ತದೆ. ನಿಮ್ಮ ಮಕ್ಕಳು ಕ್ರೀಡಾಕೂಟದಲ್ಲಿ ಸೋತಾಗ ಅವರನ್ನು ನೀವು ಹೀಯಾಳಿಸುತ್ತೀರಿ, ಆದರೆ ಇಂದು ನೀವು ಸೋತರೆ ನಿಮ್ಮ ಮಕ್ಕಳು ನಿಮ್ಮನ್ನು ಹೀಯಾಳಿಸುವ ಸಾಧ್ಯತೆ ಇದೆ. ಹೀಯಾಳಿಸುವುದರಿಂದ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ ಎಂಬುವುದು ನಿಮಗೆ ಸ್ವತಃ ಅನುಭವವಾಗುತ್ತದೆ,
ಆದ್ದರಿಂದ ನಿಮ್ಮ ಮಗು ಸೋತಾಗ ಹೀಯಾಳಿಸದೇ ಮುಂದಿನ ಬಾರಿ ಪ್ರಯತ್ನಿಸು ಎಂದು ಪ್ರೋತ್ಸಾಹಿಸಿ ಆಗ ಮಗುವಿನಲ್ಲಿ ಚಲ ಹುಟ್ಟುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ ಭಾಗವಹಿಸುವಿಕೆ ಅತ್ಯಂತ ಮುಖ್ಯ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲು ಬಂದಿರುವ ನಿಮ್ಮ ಆಸಕ್ತಿಯನ್ನು ನೋಡಿ ಖುಷಿ ಹಾಗೂ ಹೆಮ್ಮೆ ಉಂಟಾಗುತ್ತಿದೆ .