ಕುವೆಂಪು ವಿವಿಯಲ್ಲಿ ರಾಷ್ಟ್ರೀಯ ಸಮಾವೇಶ

ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆ ಅಂತಃಕರಣ ಅಗತ್ಯ: ಪ್ರೊ. ಬಿ. ಕೆ. ರವಿ

ಶಂಕರಘಟ್ಟ, ಜು. 27: ನಗರಗಳನ್ನು ಶುಚಿಗೊಳಿಸಿ ನಮ್ಮ ಬದುಕನ್ನು ಸ್ವಚ್ಛವಾಗಿಡುವ ಪೌರಕಾರ್ಮಿಕರು, ಆಹಾರ ಉತ್ಪಾದಿಸುವ ಕೃಷಿಕೂಲಿಕಾರರು, ಅಂದಗಾಣಿಸುವಂತಹ ಉಡುಪುಗಳನ್ನು ತಯಾರಿಸುವ ಗಾರ್ಮೆಂಟ್ಸ್ ನೌಕರರಂತಹ ಹಲವು ಅಸಂಘಟಿತ, ಅದೃಶ್ಯ ಕಾರ್ಮಿಕರ ಬದುಕಿನ ಕಡೆಗೆ ನಮ್ಮ ಸಮಾಜದಲ್ಲಿರುವ ನಿರ್ಲಕ್ಷ್ಯ ಮತ್ತು ಸಂವೇದನಾರಹಿತ ಮಾನಸಿಕತೆಗಳು ಬದಲಾಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ. ಕೆ. ರವಿ ಅಭಿಪ್ರಾಯಪಟ್ಟರು.

ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮದಿನಾಚರಣೆಯ ಅಂಗವಾಗಿ ಶುಕ್ರವಾರ ಕುವೆಂಪು ವಿವಿಯ ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಸಮಾಜಕಾರ್ಯ ವಿಭಾಗಗಳು ಪ್ರೊ. ಎಸ್. ಪಿ. ಹಿರೇಮಠ ಸಭಾಂಗಣದಲ್ಲಿ ಜಂಟಿಯಾಗಿ ‘ಅಸಂಘಟಿತ ವಲಯದ ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳು ಮತ್ತು ಬಲವರ್ಧನೆಯ ಮಾರ್ಗಗಳು’ ವಿಷಯ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರ ಬದುಕಿನ ಮೂಲಭೂತ ಅವಶ್ಯಕತೆಗಳಾದ ಆಹಾರ, ಆರೋಗ್ಯ-ಸ್ವಚ್ಚತೆ, ಸೂರುಗಳನ್ನು ನಿರ್ಮಿಸಲು ಶ್ರಮಿಸುವ ಲಕ್ಷಾಂತರ ಕಾರ್ಮಿಕರು ಸ್ವತಃ ಮೂಲಭೂತ ಸೌಕರ್ಯಗಳಿಲ್ಲದೇ ನರಳಾಟದ ಬದುಕು ನಡೆಸುತ್ತಿರುವುದನ್ನು ನೋಡದೇ ವ್ಯವಸ್ಥೆ ನಿರ್ಲಕ್ಷಿಸುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ರೈತರು, ಪೆಟ್ರೋಲ್ ಬಂಕ್ ನೌಕರರು, ಡೆಲಿವರಿ ಬಾಯ್‌ಗಳ ವೃತ್ತಿಗಳನ್ನು ಅಪಾರ ಘನತೆಯಿಂದ ನೋಡಲಾಗುತ್ತದೆ. ಭಾರತದಲ್ಲಿರುವ ಸಂವೇದನಾರಹಿತ ಮನಸ್ಥಿತಿಯನ್ನು ಸರಿಪಡಿಸಲು ಕೇವಲ ನೆಪಮಾತ್ರದ ಯೋಜನೆಗಳ ಬದಲಾಗಿ ಸಮಾಜದಲ್ಲಿ ಪ್ರತಿಯೊಬ್ಬರ ದೃಷ್ಟಿಕೋನದಲ್ಲಿ, ಅಂತಃಕರಣದಲ್ಲಿ ಬದಲಾವಣೆ ಆಗಬೇಕಿದೆ ಎಂದರು.
ವಿವಿಧ ಸ್ತರಗಳಲ್ಲಿ ಅದೃಶ್ಯವಾಗಿ, ಮೈಮುರಿದುಕೊಂಡು ಕೆಲಸ ಮಾಡಿ ಬಡಾವಣೆಗಳನ್ನು, ನಗರಗಳನ್ನು, ಉಳ್ಳವರ ಅವಶ್ಯಕತೆಗಳು-ಸೌಧಗಳನ್ನು ನಿರ್ಮಿಸಲು ಶ್ರಮಿಸುತ್ತಿರುವ ಕಾರ್ಮಿಕರ ಬದುಕು-ಬವಣೆಗಳೆಡೆಗೆ ಮಾಧ್ಯಮಗಳು, ಸಂಶೋಧಕರು ಸದಾ ಸೂಕ್ಷ್ಮ ಮನಸ್ಥಿತಿ ನೋಡುತ್ತಿರಬೇಕು. ಜನರಿಗೆ, ಆಳುವವರಿಗೆ, ಸರ್ಕಾರಗಳಿಗೆ ಶೋಷಿತರ ದನಿಯನ್ನು ತಲುಪಿಸಿ ಸಾಮಾಜಿಕ ನ್ಯಾಯ, ಕಾರ್ಮಿಕರ ಬದುಕುಗಳ ಬಲವರ್ಧನೆ ಹಾಗೂ ಸಂವಿಧಾನದ ಅನುಷ್ಠಾನಕ್ಕೆ ಕೈಜೋಡಿಸಬೇಕು ಎಂದು ಸಲಹೆಯಿತ್ತರು.

ಕನ್ನಡ ಪ್ರಭ ದಿನಪತ್ರಿಕೆಯ ವಿಶೇಷ ವರದಿಗಾರ ಗೋಪಾಲ್ ಎಸ್ ಯಡಗೆರೆ ಅವರು ‘ಮಾಧ್ಯಮಗಳಲ್ಲಿ ಅಸಂಘಟಿತ ಕಾರ್ಮಿಕರ ಚಿತ್ರಣ’ ವಿಷಯದ ಕುರಿತು ಮಾತನಾಡಿ, ಪತ್ರಿಕೋದ್ಯಮದಲ್ಲಿರುವ ಸಾಮಾಜಿಕ ಜವಾಬ್ದಾರಿಯನ್ನು ಮಾನವೀಯ ಅಂತಃಕರಣದೊಂದಿಗೆ ಬಳಸಿದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ನೋವುಗಳಿಗೆ, ಸಮಸ್ಯೆಗಳಿಗೆ ದಕ್ಷ ದನಿಯಾಗಬಹುದು, ಸುಧಾರಣೆ ತರಬಹುದು. ರಾಜಕೀಯ, ಅಪರಾಧ ವರದಿಗಳಿಗಿಂತ ಒಳಿತನ್ನು ಗುರುತಿಸುವ, ಶೋಷಿತರಲ್ಲಿರುವ ಪ್ರತಿಭೆಗಳು, ಅವರ ಸಂಕಟ-ಅವಶ್ಯಕತೆಗಳ ಕುರಿತು ದನಿಯಾಗಿ ಜನರಲ್ಲಿ ಉತ್ತಮ ಸಂವೇದನೆಯನ್ನು ಮೂಡಿಸಬಹುದು. ಟಿಆರ್‌ಪಿ ಬದಲಾಗಿ ಜನರ ಒಳಿತಿಗಾಗಿ ಕೆಲಸ ಮಾಡುವಂತಹ ಮಾಧ್ಯಮಗಳನ್ನು, ಪತ್ರಕರ್ತರನ್ನು ಜನರು ಬೆಂಬಲಿಸಬೇಕು ಎಂದರು.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕುಲಸಚಿವೆ ಪ್ರೊ. ಗೀತಾ ಸಿ., ಡಾ. ಬಾಬುಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಎಂ. ಆರ್., ಸಮಾಜಕಾರ್ಯ ವಿಭಾಗಾಧ್ಯಕ್ಷ ಪ್ರೊ. ಪ್ರಶಾಂತ್ ನಾಯಕ್ ಜಿ., ಮಾತನಾಡಿದರು. ವಿವಿಧ ವಿಶ್ವವಿದ್ಯಾಲಯಗಳಿಂದ ಸಂಶೋಧನಾ ಪತ್ರಿಕೆಗಳನ್ನು ಪ್ರಸ್ತುತ ಪಡಿಸಲು ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾರ್ಥಿಗಳು ಆಗಮಿಸಿದ್ದರು. ವಿವಿಯ ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಹಾಜರಿದ್ದರು.

ಸಂಘಟಿತ ಕ್ಷೇತ್ರದೊಳಗೆ ಅಸಂಘಟಿತ ಕಾರ್ಮಿಕರ ಸೃಷ್ಟಿ!
ಕಾರ್ಯಕ್ರಮದ ದಿಕ್ಸೂಚಿ ಭಾಷಣವನ್ನು ಮಾಡಿದ ಗಾರ್ಮೆಂಟ್ಸ್ ಮತ್ತು ಟೆಕ್ಸ್ಟೈಲ್ಸ್ ಕಾರ್ಮಿಕರ ಒಕ್ಕೂಟ (GATWU)ದ ಅಧ್ಯಕ್ಷೆ ಡಾ. ಪ್ರತಿಭಾ ಆರ್. ಮಾತನಾಡಿ, ಜಾಗತೀಕರಣ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳು ದುಡಿಯುವ ವರ್ಗಗಳಲ್ಲಿನ ಜನರನ್ನು ಮನುಷ್ಯರೆಂದು ನೋಡುವ ಬದಲಾಗಿ ಸಂಪನ್ಮೂಲ ಎಂದು ಪರಿಗಣಿಸುತ್ತಿದೆ. ಎಲ್ಲಡೆಯೂ ಗುತ್ತಿಗೆ ಆಧಾರದ ನೌಕರಿ ವ್ಯವಸ್ಥೆ ಜಾರಿ ಮೂಲಕ ಸಂಘಟಿತ ಕ್ಷೇತ್ರಗಳೊಳಗೆ ಸಹ ಅಸಂಘಟಿತ ಕಾರ್ಮಿಕರನ್ನು ಸೃಷ್ಟಿಸಿ ಆಧುನಿಕ ಜೀತವನ್ನು ಜಾರಿ ಮಾಡುತ್ತಿರುವುದು ಖಂಡನೀಯ ವಿಚಾರ ಎಂದು ಅಭಿಪ್ರಾಯಪಟ್ಟರು.

ಗುತ್ತಿಗೆ ಕಾರ್ಮಿಕರಿಗೆ ಪಿಂಚಣಿ, ಬೋನಸ್, ಎಲ್.ಟಿ.ಸಿ., ಪಿಎಫ್, ಉದ್ಯೋಗ ಭದ್ರತೆ, ಸುಲಭ ಸಾಲ ಸೌಲಭ್ಯಗಳು ಯಾವುವು ದೊರೆಯುವುದಿಲ್ಲ. ಸರ್ಕಾರಗಳು ಸಾರ್ವಜನಿಕ ಸಂಸ್ಥೆಗಳಲ್ಲಿನ ತಮ್ಮ ಹೂಡಿಕೆ ಹಿಂಪಡೆದು ಖಾಸಗಿ ಕ್ಷೇತ್ರಕ್ಕೆ ಕೆಂಪುಹಾಸು ನೀಡುತ್ತಿವೆ. ಅಂತಾರಾಷ್ಟ್ರೀಯ ಸಂಸ್ಥೆಗಳು, ಬಂಡವಾಳಶಾಹಿಗಳು, ಸರ್ಕಾರಗಳು, ಮಾಲೀಕರು ಎಲ್ಲರೂ ಒಟ್ಟಾಗಿ ಈ ವ್ಯವಸ್ಥೆನಿರ್ಮಾಣಕ್ಕೆ ಬಹುಹಂತದಲ್ಲಿ ಕೈಜೋಡಿಸಿವೆ. ಶತಮಾನಗಳ ಹೋರಾಟದ ಫಲವಾಗಿ ಸಿಕ್ಕ 8ಗಂಟೆಗಳ ದುಡಿಮೆಯ ಅವಧಿಯನ್ನು 12 ಗಂಟೆಗಳಿಗೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗುತ್ತದೆ. ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ಅಹಾರಗಳು ಖಾಸಗೀ ಕ್ಷೇತ್ರ ಹೋಗಿದ್ದು ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ದುಡಿಯುವಂತಹ ಆಧುನಿಕ ಜೀತ, ನವಉಳಿಗಮಾನ್ಯ ಪದ್ಧತಿಗಳು ಜಾರಿಯಾಗುತ್ತಿರುವುದು ಎಚ್ಚರಿಕೆಯ ಗಂಟೆಯಾಗಬೇಕು ಎಂದು ಕರೆಕೊಟ್ಟರು.

ಸ್ನಾತಕೋತ್ತರ ಪದವಿ ಮುಗಿಸಿದವರೂ ಸಹ ಅರೆಕಾಲಿಕ, ಅಲ್ಪಾವಧಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಮನೆಯ ಒಳಗೆ ಮತ್ತು ಹೊರಗೆ ಹೆಣ್ಣು ಮಕ್ಕಳದ್ದು ಮೂಲ ದುಡಿಮೆ ಬದಲಾಗಿ ಪೂರಕ ಆದಾಯ ಮಾತ್ರ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಕಡಿಮೆ ಸಂಬಳ, ಆದ್ಯತೆ, ಮನ್ನಣೆಗಳನ್ನು ನೀಡುತ್ತಿರುವುದನ್ನು ಕಾಣುತ್ತಿದ್ದೇವೆ. ಬೀಡಿ ಕಟ್ಟುವುದು, ಬಟ್ಟೆ ತಯಾರಿಕೆ, ಊದುಬತ್ತಿ ಮಾಡುವುದು ಸೇರಿದಂತೆ ಹಲವು ವಲಯಗಳಲ್ಲಿ ವಿಶೇಷವಾಗಿ ಅಲ್ಪಸಂಖ್ಯಾತ, ದಲಿತ, ಶೋಷಿತ ಸಮುದಾಯದ ಹೆಣ್ಣುಮಕ್ಕಳೇ ದುಡಿಯುತ್ತಿದ್ದಾರೆ. ಇಂತಹ ಮಹಿಳಾ ಕೆಲಸಗಾರರ ಸ್ಥಿತಿಯಂತೂ ಇನ್ನಷ್ಟು ಶೋಚನೀಯವಾಗಿದೆ ಎಂದರು.

error: Content is protected !!