ದೇಶಭಕ್ತಿ ಮತ್ತು ಹೊಣೆಗಾರಿಕೆಯಿಂದ ಬದುಕಬೇಕು: ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗ ಮೇ 28: ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಋಣ ನಮ್ಮ ಮೇಲಿದ್ದು, ನಾವೆಲ್ಲ ದೇಶಭಕ್ತರಾಗಿ ಹೊಣೆಗಾರಿಕೆಯಿಂದ ಬದುಕಬೇಕಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ನುಡಿದರು.
ಜಿಲ್ಲಾಡಳಿತ, ಜಿ.ಪಂ., ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮೂಡುಗೊಪ್ಪೆ(ನಗರ) ಗ್ರಾ.ಪಂ ಇವರ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಇಂದು ಹೊಸನಗರ ತಾಲೂಕಿನ ಬಿದನೂರು ಕೋಟೆ ಮೂಡುಗುಪ್ಪೆ ಇಲ್ಲಿ ಆಯೋಜಿಸಲಾಗಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಮಾತೆಯನ್ನು ಬ್ರಿಟಿಷರ ದಾಸ್ಯದಿಂದ ಬಂಧಮುಕ್ತಗೊಳಿಸುವುದಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು, ಹೋರಾಟದ ವೃತ್ತಾಂತವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನಮಗೆ ಅನ್ನದ ಕೊರತೆಯಾದರೆ, ಬಟ್ಟೆ, ಇತರೆ ವಸ್ತುಗಳ ಕೊರತೆಯಾದರೆ ನೀಗಿಸಬಹುದು. ಆದರೆ ದೇಶಭಕ್ತಿ ಕೊರತೆಯಾದರೆ ಉಳಿಗಾಲವಿಲ್ಲ. ಆದ್ದರಿಂದ ನಾವೆಲ್ಲ ಸ್ವಾತಂತ್ರ್ಯ ಹೋರಾಟದ ಇತಿಹಾಸದೆಡೆ ಬೆಳಕು ಚೆಲ್ಲಿ, ನಮ್ಮ ಹೃದಯದಲ್ಲಿ ಪಾವಿತ್ರ್ಯತೆ, ದೇಶಭಕ್ತಿ ಹೊಂದಬೇಕು. ದೇಶಭಕ್ತರಾಗಬೇಕು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಶಾಂತಿಯುತ ಹೋರಾಟ ಮತ್ತು ವೀರ ಸಾವರ್ಕರ್ರಂತಹವರು ಕ್ರಾಂತಿಕಾರಿ ಹೋರಾಟ ನಡೆಸಿದರು. ಇಂದು ವೀರ ಸಾವರ್ಕರ್ ರವರ ಜನ್ಮ ದಿನವಾಗಿದ್ದು ಇಂತಹ ತ್ಯಾಗಮಯಿ ಹೋರಾಟಗಾರರ ಬದುಕನ್ನು ತಿಳಿಯಬೇಕು.
ಸಾವರ್ಕರ್ ರಂತಹ ಕ್ರಾಂತಿಕಾರರನ್ನು ಇರಿಸಿದ್ದ, ಗಲ್ಲಿಗೇರಿಸಲಾದ ಅಂಡಮಾನ್ ಕಾರಾಗೃಹವನ್ನು ಎಲ್ಲರೂ ನೋಡಬೇಕು. ಈ ಕಾರಾಗೃಹ ಹೋರಾಟಗಾಋ ತ್ಯಾಗ, ಬಲಿದಾನದ ರೋಚಕ ಸಂಗತಿಗಳನ್ನು ತಿಳಿಸುತ್ತವೆ. ಅಮೃತಸರದ ಸಭಾಗೃಹದಲ್ಲಿ ಈಗಲೂ ಹೋರಾಟಗಾರರಿಗೆ ಗುಂಡಿಟ್ಟ ಗುರುತುಗಳಿವೆ.
ನಾವೀಗ ಅವರಂತೆ ತ್ಯಾಗ, ಬಲಿದಾನ ನೀಡಬೇಕಿಲ್ಲ. ಅವರ ಹೋರಾಟದ ಫಲವಾಗಿ ಚೆನ್ನಾಗಿದ್ದೇವೆ. ಸಿದ್ಧಾಂತದ, ಇಂತಹ ವೀರ ಭೂಮಿಯಲ್ಲಿ ದೇಶಭಕ್ತಿ ಹೊಂದಿ, ಪ್ರಾಮಾಣಿಕತೆ ಮತ್ತು ಹೊಣೆಗಾರಿಕೆಯಿಂದ ಬದುಕುವ ಸಂಕಲ್ಪವನ್ನು ಮಾಡಿ ಬದುಕುವುದು ಆಗಬೇಕು. ಆಗ ನಮ್ಮ ದೇಶ ಇನ್ನಷ್ಟು ಸಂಪದ್ಭರಿತವಾಗಿ, ಪ್ರಜಾತಂತ್ರ ವ್ಯವಸ್ಥೆ ಗಟ್ಟಿಗೊಳ್ಳುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ನಾವೆಲ್ಲ ಸಾಗೋಣ ಎಂದು ಕರೆ ನೀಡಿದರು.
ಪತ್ರಕರ್ತ ಸಂತೋಷ್ ತಮ್ಮಯ್ಯ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಿದನೂರು ಕೋಟೆ ಮೂಡುಗೊಪ್ಪೆ ಗ್ರಾ.ಪಂ ಅಧ್ಯಕ್ಷ ಕರುಣಾಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಎಸಿ ಡಾ.ನಾಗರಾಜ್, ಹೊಸನಗರ ತಹಶೀಲ್ದಾರ್ ರಾಜೀವ್, ತಾ.ಪಂ ಇಓ ಪ್ರವೀಣ್ ಕುಮಾರ್, ಕನ್ನಡ ಸಂಸ್ಕ್ರತ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.