ಶಿವಮೊಗ್ಗ: ಸಾರ್ವಜನಿಕರು ಅಧಿಕೃತ ಚಿಟ್ಸ್ ಕಂಪನಿಗಳಲ್ಲಿ ವ್ಯವಹಾರ ಮಾಡಬೇಕು ಎಂದು ಕರ್ನಾಟಕ ರಾಜ್ಯ ಚಿಟ್ಸ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಟಿ.ಸಿ.ವಿಜಯಕುಮಾರ್ ಹೇಳಿದರು.
ಶಿವಮೊಗ್ಗ ಜಿಲ್ಲಾ ಚಿಟ್ಸ್ ಅಸೋಸಿಯೇಷನ್ ಆಹ್ವಾನದ ಮೇರೆಗೆ ಶಿವಮೊಗ್ಗ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಹಣಕಾಸಿನ ವ್ಯವಹಾರ ಆರಂಭ ಆಗುವ ಮೊದಲೇ ಚಿಟ್ ಫಂಡ್ ಆರಂಭ ಆಗಿದ್ದು, ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಇದರ ಬೆಲೆ ಅರಿಯದೆ ಬೇರೆ ಬೇರೆ ಪ್ರಕಾರದ ಹಣ ಕಾಸಿನ ವ್ಯವಹಾರದಲ್ಲಿ ತೊಡಗಿಸಿಕೊಂಡು ಚಿಟ್ ಫಂಡ್ ಉದ್ಯಮದಿಂದ ದೂರವಾಗುತ್ತಿದ್ದಾರೆ ಎಂದು ತಿಳಿಸಿದರು.
ಅಧಿಕೃತ ಚಿಟ್ಸ್ ವ್ಯವಹಾರದ ಮಹತ್ವ ತಿಳಿಸಿ ಮುಂದುವರೆಸಿಕೊಂಡು ಹೋಗುವಂತೆ ಮಾಡಲು ಶ್ರಮಿಸಬೇಕು. ಬಂಡವಾಳ ಹೆಚ್ಚಿದ್ದವರು ಉಳಿತಾಯ ಮಾಡಿ, ಬಂಡವಾಳ ಕೊರತೆ ಇರುವವರಿಗೆ ಅನುಕೂಲ ಮಾಡಿಕೊಡುವಲ್ಲಿ ಚಿಟ್ ಫಂಡ್ ಮಹತ್ವದ ಪಾತ್ರ ವಹಿಸುತ್ತದೆ. ಉದ್ಯಮವನ್ನು ಬೆಳೆಸಲು ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇವೆ ಎಂದರು.
ಮುಂದಿನ ದಿನಗಳಲ್ಲಿ ಉದ್ಯಮದಲ್ಲಿ ಇರುವ ಎಲ್ಲ ಸಂಸ್ಥೆಗಳನ್ನು ಒಗ್ಗೂಡಿಸಿ, ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಲಸ ರಾಜ್ಯ ಮಟ್ಟದ ಸಂಘದಿಂದ ಆಗುವಂತೆ ಪ್ರಯತ್ನಿಸಲಾಗುವುದು ಎಂದು ಹೇಳಿದರು. ರಾಜ್ಯ ಸಂಘದ ಪದಾಧಿಕಾರಿ ಮತ್ತು ಶಿವಮೊಗ್ಗದ ಸಹ್ಯಾದ್ರಿ ಚಿಟ್ ಫಂಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್ ಮಾತನಾಡಿ, ಸರ್ಕಾರಿ ನೋಂದಾಯಿತ ಚಿಟ್ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವಂತೆ ಮತ್ತು ಚಿಟ್ ಫಂಡ್, ಉಳಿತಾಯ ಮತ್ತು ಆಪತ್ಕಾಲ ನಿಧಿ ಎನ್ನುವುದನ್ನು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.
ಶಿವಮೊಗ್ಗ ಜಿಲ್ಲಾ ಚಿಟ್ಸ್ಟರ್ಸ್ ಅಸೋಸಿಯೇಷನ್ ಆಹ್ವಾನದ ಮೇರೆಗೆ ಕರ್ನಾಟಕ ಚಿಟ್ಸ್ರ‍್ಸ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ನೀಡಿದರು. ಕರ್ನಾಟಕ ರಾಜ್ಯ ಚಿಟ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಮನೋಹರ್ ಮಲ್ಲಾ ರಾಜಯ್ಯ, ಕಾರ್ಯದರ್ಶಿ ಹರೀಶ್, ಸಹಕಾರದ ಕಾವ್ಯಂಕ, ಖಜಾಂಚಿ ನರೇಂದ್ರ ಕೆಎಸ್, ಬದರೀನಾಥ್, ಶಿವರಾಜು, ಜಿ.ವಿಜಯ್‌ಕುಮಾರ್, ಮಂಜುನಾಥ್, ಪ್ರೇಮ್‌ಕುಮಾರ್, ಆದಿತ್ಯ, ಮಹಾಲಿಂಗಯ್ಯ ಉಪಸ್ಥಿತರಿದ್ದರು.