ಶಿವಮೊಗ್ಗ : ನವೆಂಬರ್-20 : ತೋಟಗಾರಿಕೆ ಇಲಾಖೆಯು ಜಿಲ್ಲೆಯ ಅಡಿಕೆ ಬೆಳಗಾರರಿಗೆ ಅಡಿಕೆ ಹಳದಿ ಎಲೆರೋಗದ ಕುರಿತು ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಕುರಿತು ತಿಳಿಸಿದೆ.
ಈ ರೋಗವು ಪೈಟೋಪ್ಲಾಸ್ಮಾ ಎನ್ನುವ ಸೂಕ್ಷಾಣು ಜೀವಿಯಿಂದ ಹರಡುತ್ತಿದ್ದು, ಮೊದಲು ಹೊರಸುತ್ತಿನ ಎಲೆಯ ತುದಿ ಭಾಗ ಹಳದಿಯಾಗುತ್ತದೆ ನಂತರ ಇದು ಎಲೆಯ ಮಧ್ಯಭಾಗಕ್ಕೂ ಹರಡುತ್ತದೆ. ರೋಗ ತೀವ್ರವಾದಂತೆ ಎಲ್ಲಾ ಎಲೆಗಳು ಹಳದಿಯಾಗಿ, ಒಣಗಿ ಕೆಳಗೆ ಬೀಳುತ್ತವೆ. ಬೇರುಗಳ ತುದಿಯು ಗಡುಸಾಗಿ ಕಪ್ಪು ಬಣ್ಣಕ್ಕೆ ತಿರುಗವ ಸಾಧ್ಯತೆ ಇರುತ್ತದೆ. ಅಡಿಕೆಯು ಕಂದು ಬಣ್ಣದಾಗಿದ್ದು ತಿನ್ನಲು ಯೋಗ್ಯವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ರೋಗಕ್ಕೆ ಸೂಕ್ತ ಮುಂಜಾಗೃತ ಕ್ರಮಗಳು: ಪ್ರಚಲಿತದಲ್ಲಿರುವ ಯಾವುದೇ ಔಷಧಗಳಿಂದ ಈ ರೋಗದ ನಿವಾರಣೆ ಸಾಧ್ಯವಿಲ್ಲ. ಬಸಿಗಾಲುವೆಗಳನ್ನು ನಿರ್ಮಿಸುವುದು. ಅಲಸಂದಿ ಅಥವಾ ಇನ್ನಿತರ ಹಸಿರೆಲೆ ಬೆಳೆಗಳನ್ನು ಗಿಡಗಳ ನಡುವಿನ ಸ್ಥಳದಲ್ಲಿ ಬೆಳೆಯುವುದು. ಹಸಿರೆಲೆ ಮತ್ತು ತಿಪ್ಪೆಗೊಬ್ಬರಗಳನ್ನು ಯತೇಚ್ಚವಾಗಿ ಒದಗಿಸುವುದು. ಬೇಸಿಗೆಯಲ್ಲಿ ಉತ್ತಮ ನೀರಿನ ನಿರ್ವಹಣೆ ಮಾಡುವುದು. ಅಡಿಕೆಗೆ ಶಿಫಾರಸ್ಸು ಮಾಡಲಾದ ರಸಗೊಬ್ಬರಗಳನ್ನು ಹಾಗೂ ಲಘುಪೋಷಕಾಂಶಗಳನ್ನು ತಪ್ಪದೇ ಕೊಡಬೇಕು. ಒಂದು ಕಿ. ಗ್ರಾಂ. ನಷ್ಟು ಫಾಸ್ಫೇಟ್ ಗೊಬ್ಬರ, 2 ಕಿ. ಗ್ರಾಂ. ಬೇವಿನ ಹಿಂಡಿಯನ್ನು ಎರಡು ಕಂತುಗಳಲ್ಲಿ ಪ್ರತಿ ಗಿಡಕ್ಕೆ ಕೊಡಬೇಕು. ರೋಗ ಬಂದು ಒಣಗಿದ ಮರಗಳನ್ನು ಬೇರು ಸಮೇತ ಸುಟ್ಟುಹಾಕುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!