ಶಿವಮೊಗ್ಗ, ಮೇ20 : ಶಿವಮೊಗ್ಗ ನಗರದಲ್ಲಿ ಅಟೋ ಮೀಟರ್ ಹಾಕದೆ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಎಲ್ಲಾ ಅಟೋ ಚಾಲಕರು ಕಡ್ಡಾಯವಾಗಿ ಅಟೋ ಮೀಟರ್ ಹಾಕಬೇಕು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಅವರು ಸೋಮವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ಪ್ರಯಾಣಿಕರು ಹೇಳಿದರೆ ಮಾತ್ರ ಅಟೋ ಚಾಲಕರು ಮೀಟರ್ ಹಾಕುವಂತಹ ಪರಿಪಾಟವಿದೆ. ಇದು ಸಲ್ಲದು. ಕಡ್ಡಾಯವಾಗಿ ಪ್ರತಿ ಬಾರಿ ಮೀಟರ್ ಹಾಕಬೇಕು. ಎಲ್ಲಾ ಅಟೋಗಳಲ್ಲಿ ಚಾಲಕನ ಹೆಸರು, ವಿಳಾಸ, ಛಾಯಾಚಿತ್ರ, ಅಟೋ ವಿವರ ಸೇರಿದಂತೆ ಇನ್ನಿತರ ಮಾಹಿತಿ ಫಲಕವನ್ನು ಅಳವಡಿಸಬೇಕು. ನಗರದಲ್ಲಿ ಅಟೋಗಳ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಇನ್ನು ಮುಂದೆ ಅಟೋ ಖರೀದಿ ಮಾಡುವ ಪೂರ್ವದಲ್ಲಿ ನೋಂದಣಿಗೆ ಅನುಮತಿ ನೀಡುವ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಬಗ್ಗೆ ಪರಿಶೀಲಿಸಲು ಅವರು ಸೂಚನೆ ನೀಡಿದರು.
ಇಲೆಕ್ಟ್ರಿಕಲ್ ಅಟೋ ಅನುಮತಿ: ಶಿವಮೊಗ್ಗ ನಗರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾಗಿ ಇಲೆಕ್ಟ್ರಿಕಲ್ ಅಟೋ ಅನುಮತಿಯನ್ನು ಪ್ರಾಯೋಗಿಕವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪ್ರೀ ಪೇಯ್ಡ್ ಕೌಂಟರ್: ರೈಲ್ವೇ ನಿಲ್ದಾಣದಲ್ಲಿ ಮುಂಗಡ ಪಾವತಿ ಅಟೋ ಕೌಂಟರ್ ಆರಂಭಿಸಲು ಅನುಮತಿಯನ್ನು ನೀಡಲಾಗಿದೆ. ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮಿನಿ ಬಸ್ ಸೇವೆಯನ್ನು ಆರಂಭಿಸಲು ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.
ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ತೋರಿಸಿದರೂ ಕೆಲವು ಖಾಸಗಿ ಬಸ್‍ಗಳಲ್ಲಿ ರಿಯಾಯಿತಿ ನೀಡಲು ನಿರಾಕರಿಸಿರುವ ಬಗ್ಗೆ ದೂರುಗಳನ್ನು ಸ್ವೀಕರಿಸಲಾಗಿದ್ದು, ಅಂತಹ ಸಂಸ್ಥೆಗಳಿಗೆ ನೋಟೀಸ್ ಜಾರಿಗೊಳಿಸಬೇಕು. ಎಲ್ಲಾ ಬಸ್ ನಿಲ್ದಾಣಗಳಲ್ಲಿ ಅಂಗವಿಕಲ ಪ್ರಯಾಣಿಕರಿಗಾಗಿ ರ್ಯಾಂಪ್ ಹಾಗೂ ಗಾಲಿಕುರ್ಚಿ ವ್ಯವಸ್ಥೆಯನ್ನು ಕಲ್ಪಿಸಬೇಕು ಜಿಲ್ಲಾಧಿಕಾರಿ ಅವರು ತಿಳಿಸಿದರು.
ರಸ್ತೆ ಉಬ್ಬಿಗೆ ಬಣ್ಣ: ರಿಪ್ಪನ್‍ಪೇಟೆ ರೈಲ್ವೇ ಗೇಟ್ ಬಳಿ ಇರುವ ರಸ್ತೆ ಉಬ್ಬಿಗೆ ಬಣ್ಣ ಬಳಿಯದ ಕಾರಣ ಹಲವಾರು ಅಪಘಾತಗಳು ಸಂಭವಿಸುತ್ತಿರುವ ಕಾರಣ ಸ್ಥಳೀಯ ಬಾಲಕನೋರ್ವ ಸ್ವಯಂಪ್ರೇರಣೆಯಿಂದ ರಸ್ತೆ ಉಬ್ಬಿಗೆ ಬಣ್ಣ ಬಳಿದಿರುವ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದರಿ ರಸ್ತೆ ಉಬ್ಬಿಗೆ ಖಾಯಂ ಬಣ್ಣವನ್ನು ಬಳಿದು ಸೂಚನಾ ಫಲಕಗಳನ್ನು ಅಳವಡಿಸಬೇಕು. ಈ ರೀತಿಯ ಅಪಾಯಕಾರಿ ರಸ್ತೆ ಉಬ್ಬುಗಳಿಗೆ ಎಚ್ಚರಿಕೆ ಬಣ್ಣವನ್ನು ಕಡ್ಡಾಯವಾಗಿ ಹಾಕುವಂತೆ ಅವರು ಆ ಬಳಿಕ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸೂಚನೆ ನೀಡಿದರು.

ಪೊಲೀಸ್ ವರಿಷ್ಟಾಧಿಕಾರಿ ಡಾ.ಅಶ್ವಿನಿ, ಪ್ರಾದೇಶಿಕ ಸಾರಿಗೆ ಜಂಟಿ ಆಯುಕ್ತ ಶಿವರಾಜ ಪಾಟೀಲ್, ವಿವಿಧ ಸಾರಿಗೆ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!