ಶಿವಮೊಗ್ಗ, ಜುಲೈ 04 ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸುಮಾರು 19ಎಕ್ರೆ ಪ್ರದೇಶದಲ್ಲಿ ನಿರ್ಮಿಸಿ ಹಂಚಿಕೆ ಮಾಡಿರುವ ಅಟೋಕಾಂಪ್ಲೆಕ್ಸ್ ಮುಂದಿನ ನಿರ್ವಹಣೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಹಸ್ತಾಂತರ ಪ್ರಸ್ತಾವಕ್ಕೆ ಅನುಮೋದನೆ ನೀಡಿದರು.
ದೇವಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ವಿದ್ಯುತ್ ಸಂಪರ್ಕ ಕೋರಿ ಅರ್ಜಿಯನ್ನು ನೋಂದಣಿ ಮಾಡಿದ 10ದಿನಗಳ ಒಳಗಾಗಿ ಸಂಪರ್ಕವನ್ನು ಕಲ್ಪಿಸಬೇಕು. ಅಲ್ಕೊಳ ಸಬ್ ಸ್ಟೇಷನ್ನಿಂದ ಮುದ್ದಿನಕೊಪ್ಪ ಕ್ರಾಸ್ ವರೆಗೆ ಯುಜಿ ಕೇಬಲ್ ಅಳವಡಿಕೆ ಕಾರ್ಯ ಆರಂಭಿಸಬೇಕು. ಮುದ್ದಿನಕೊಪ್ಪ ಕ್ರಾಸ್ನಿಂದ ಕೈಗಾರಿಕಾ ಪ್ರದೇಶದವರೆಗೆ ಓವರ್ ಹೆಡ್ ಲೈನ್ಗಳ ಮುಖಾಂತರ ಎಕ್ಸ್ಪ್ರೆಸ್ ಫೀಡರ್ಗಳನ್ನು ಎಳೆಯುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಅಟೋ ಕಾಂಪ್ಲೆಕ್ಸ್ನಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ತಕ್ಷಣ ಕಲ್ಪಿಸುವಂತೆ ಅವರು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತಾಪ ಸಲ್ಲಿಕೆ: ಶಿವಮೊಗ್ಗದ ಮಾಚೇನಹಳ್ಳಿ-ನಿಧಿಗೆ ಕೈಗಾರಿಕಾ ಪ್ರದೇಶಗಳನ್ನು ಒಟ್ಟಿಗೆ ಸೇರಿಸಿ ಪ್ರತ್ಯೇಕ ಕೈಗಾರಿಕಾ ನಗರ ಪ್ರಾಧಿಕಾರ ಸ್ಥಾಪನೆ ಮಾಡುವ ಪ್ರಸ್ತಾವನೆಯನ್ನು ಈಗಾಗಲೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರತ್ಯೇಕ ಪ್ರಾಧಿಕಾರ ರಚನೆ ಬಳಿಕ ಘನತ್ಯಾಜ್ಯಗಳ ವಿಲೇವಾರಿಗೆ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪೌಂಡ್ರಿ ಘಟಕಗಳಲ್ಲಿ ಉಪಯೋಗಿಸಿದ ಮರಳನ್ನು ಕಲ್ಲು ಗಣಿಗಳಲ್ಲಿ ಹಾಕಲು ಅನುಮತಿ ನೀಡುವಂತೆ ಕೋರಿ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷರು ನೀಡಿರುವ ಮನವಿಯನ್ನು ಪರಿಶೀಲಿಸಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗೆ ಅವರು ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಅಧಿಕಾರಿಗಳ ಗೈರು: ಕೈಗಾರಿಕಾ ವಲಯಕ್ಕೆ ಸಂಬಂಧಿಸಿದಂತೆ ನಡೆಯುವ ಯಾವುದೇ ಸಭೆಗಳಿಗೆ ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಬಾರದೇ ಗೈರು ಹಾಜರಾಗುತ್ತಿರುವ ಕಾರಣದಿಂದಾಗಿ ಹಲವಾರು ತೀರ್ಮಾನಗಳ ಜಾರಿಯಲ್ಲಿ ವಿಳಂಬವಾಗುತ್ತಿದೆ. ಈ ಕುರಿತು ಸಂಬಂಧಪಟ್ಟವರಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಒತ್ತಾಯಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಇಲಾಖೆಯ ಅಪರ ನಿರ್ದೇಶಕ ಹಾಗೂ ಜಿಲ್ಲೆಯ ನೋಡಲ್ ಅಧಿಕಾರಿ ಸತೀಶ್, ವಿವಿಧ ಇಲಾಖಾ ಅಧಿಕಾರಿಗಳು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.