ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಅಂತಾರಾಷ್ಟ್ರೀಯ ಕಿರುಧಾನ್ಯ ವರ್ಷ-2023 ಮತ್ತು ಪೌಷ್ಠಿಕತೋಟ ಮತ್ತು ವೃಕ್ಷಾರೋಪಣ ಪ್ರಚಾರಾಂದೋಲನ ಕಾರ್ಯಕ್ರಮವನ್ನು ಇಫ್ಕೋ ಪ್ರೈ.ಲಿ., ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೈತರಿಗೆ ಸಸಿಗಳನ್ನು ಕೊಡುವುದರ ಮೂಲಕ ಚಾಲನೆ ನೀಡಿದರು.
ಡಾ. ಎಂ.ಹನುಮಂತಪ್ಪ, ಶಿಕ್ಷಣ ನಿರ್ದೇಶಕರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ . ಇವರು ಮಾತನಾಡುತ್ತಾ, ಕಿರುಧಾನ್ಯಗಳಾದ ನವಣೆ, ಸಜ್ಜೆ, ಸಾಮೆ, ಊದಲು, ಹಾರಕ, ಬರಗು, ರಾಗಿಯನ್ನು ಬೆಳೆಯಬೇಕು. ಅಲ್ಲದೆ, ಈ ಕಿರುಧಾನ್ಯಗಳು ನಮ್ಮ ಊಟದ ತಟ್ಟೆಯಲ್ಲಿ ಆಹಾರದ ಒಂದು ಭಾಗವಾಗಿರಬೇಕು. ಇದರಿಂದ ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯರಲ್ಲಿ ಮತ್ತು ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನೀಗಿಸಬಹುದೆಂದರು.
ಡಾ. ಆರ್.ಸಿ.ಜಗದೀಶ, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ಇವರು ಅಂತಾರಾಷ್ಟ್ರೀಯ ಕಿರು ಧಾನ್ಯ ವರ್ಷದ ಮಹತ್ವವನ್ನು ತಿಳಿಸುತ್ತಾ, ಕಿರುಧಾನ್ಯಗಳನ್ನು ಮತ್ತೆ ಬೆಳೆಯುವ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಬೇಕೆಂದು ರೈತರಿಗೆ ತಿಳಿಸಿದರು. ಆಹಾರ ವೈವಿಧ್ಯತೆಯನ್ನು ಹೆಚ್ಚಿಸಲು ಮತ್ತು ನ್ಯೂನ ಪೋಷಣೆ ಹೋಗಲಾಡಿಸಲು ಆಹಾರ ಸುಭದ್ರತೆಯನ್ನು ಹೆಚ್ಚಿಸಲು ಪೌಷ್ಠಿಕತೋಟ ಸ್ಥಾಪಿಸುವುದು ಮತ್ತು ಕಿರುಧಾನ್ಯಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಡಿ. ಎಂ. ಬಸವರಾಜ, ಉಪನಿರ್ದೇಶಕರು, ಕೃಷಿ ಇಲಾಖೆ, ಶಿವಮೊಗ್ಗ ಇವರು ಮಾತನಾಡುತ್ತಾ, ಸಮಗ್ರ ಆಹಾರ ಸೇವನೆಯಿಂದ ಸಮಗ್ರ ಪೋಷಕಾಂಶಗಳು ನಮ್ಮ ದೇಹಕ್ಕೆ ಲಭಿಸಿ, ನಮ್ಮ ದೇಹದ ಸಮಗ್ರ ಬೆಳೆವಣಿಗೆಗೆ ಉಪಯೋಗವಾಗುವುದೆಂದು ತಿಳಿಸಿದರು. ಅಲ್ಲದೆ, ಹಸಿರು ಸೊಪ್ಪು, ತರಕಾರಿಗಳು ಮತ್ತು ಕಿರುಧಾನ್ಯಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇವಿಸುವುದರಿಂದ ಸಮತೋಲನ ಆಹಾರ ನಮ್ಮ ದೇಹಕ್ಕೆ ದೊರೆತು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದೆಂದು ತಿಳಿಸಿದರು.
ಶ್ರೀ ನವೀನ್ ಎಸ್. ಪಾಟೀಲ್, ಕ್ಷೇತ್ರ ಅಧಿಕಾರಿ, ಇಫ್ಕೋ ಪ್ರೈ.ಲಿ., ಶಿವಮೊಗ್ಗ ಇವರು ಇಫ್ಕೋ ಸಂಸ್ಥೆಯ ಸಮಾಜಿಕ ಕಾಳಜಿಗಳ ಬಗ್ಗೆ ಮಾಹಿತಿ ನೀಡಿ, ತರಕಾರಿ ಕಿಟ್ ಮತ್ತು ತರಕಾರಿ ಬೆಳೆಗಳನ್ನು ಬೆಳೆಯುವುದರ ಮಹತ್ವ ಮತ್ತು ನಮ್ಮ ದೇಹಕ್ಕೆ ದೊರೆಯುವ ಪ್ರಮುಖ ಪೋಷಕಾಂಶಗಳ ಬಗ್ಗೆ ತಿಳಿಸಿದರು. ಇಫ್ಕೋ ಪ್ರೈ.ಲಿ., ಶಿವಮೊಗ್ಗದ ವತಿಯಿಂದ 100 ಜನರಿಗೆ ತರಕಾರಿ ಬೀಜದ ಕಿಟ್‍ಗಳನ್ನು ಉಚಿತವಾಗಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ನರೇಂದ್ರ ಸಿಂಗ್ ತೋಮರ್, ಮಾನ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವರು, ಕೇಂದ್ರ ಸರ್ಕಾರ ಇವರು ಹೈದರಾಬಾದ್‍ನಲ್ಲಿ ಉದ್ಘಾಟಿಸಿದ ಅಂತಾರಾಷ್ಟ್ರೀಯ ಕಿರು ಧಾನ್ಯ ವರ್ಷ-2023ರ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಣೆ ಮಾಡಿಸಲಾಯಿತು. ಕನ್ನಡ ಅನುವಾದವನ್ನು ಡಾ.ಇಮ್ರಾನ್ ಖಾನ್, ಸಹಾಯಕ ಪ್ರಧ್ಯಾಪಕರು (ಸಸ್ಯ ರೋಗಶಾಸ್ತ್ರ), ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಸಂಕ್ಷಿಪ್ತವಾಗಿ ವಿವರಿಸಿದರು.
ಡಾ.ಬಿ.ಸಿ.ಹನುಮಂತಸ್ವಾಮಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೆ.ವಿ.ಕೆ., ಶಿವಮೊಗ್ಗ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ನಾಗರಾಜ, ಆರ್. ಕಾರ್ಯಕ್ರಮ ಸಹಾಯಕರು, ಇವರು ನಡೆಸಿಕೊಟ್ಟರು. ಡಾ. ಎಂ. ಬಸವರಾಜ, ವಿಜ್ಞಾನಿ (ಬೇಸಾಯ ಶಾಸ್ತ್ರ) ಇವರು ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ವಿ.ಕೆ. ಸಿಬ್ಬಂದಿಗಳು ಸಹ ಉಪಸ್ತಿತರಿದ್ದರು.
ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು, ಯುವತಿಯರು ಮತ್ತು ಯುವಕರು ಹಾಗೂ ಚೈತನ್ಯ ರೂರಲ್ ಡೆವೆಲಪ್‍ಮೆಂಟ್ ಸೊಸೈಟಿ, ಶಿವಮೊಗ್ಗ ಮತ್ತು ಆಸರೆ ಸರ್ಕಾರೇತರ ಸಂಸ್ಥೆಯ ಸದಸ್ಯರು ಸೇರಿದಂತೆ ಒಟ್ಟು 280 ಜನರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.