ಸರ್ವೇ ಜನಾಃ ಸುಖಿನೋ ಭವಂತು | 9 ನೇ ಅಂತರಾಷ್ಟೀಯ ಯೋಗ ದಿನಾಚರಣೆಯ ಶುಭಾಶಯಗಳು.
‘ಯೋಗ’ ಎನ್ನುವುದು ಭಾರತದ ಪುರಾತನ ವಿಜ್ಞಾನ. ಈ ಯೋಗವು ವೇದಕಾಲದಿಂದಲೂ ಪ್ರಚಲಿತದಲ್ಲಿದ್ದು ಸುಮಾರು ಆರು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಯೋಗವು ಬರೀ ವಿಜ್ಞಾನವಾಗಿರದೆ ಇದೊಂದು ಜೀವನ ಶೈಲಿಯಾಗಿದೆ. ಪುರಾತನ ಕಾಲದಿಂದ ಎಲ್ಲಾ ಹಿರಿಯ ಮಹರ್ಷಿಗಳು ಯೋಗ ಜೀವನವನ್ನು ಅಳವಡಿಸಿಕೊಂಡು ಅದರ ಸಂಪೂರ್ಣ ಪ್ರಯೋಜನವನ್ನು ಪಡೆದಿರುತ್ತಾರೆ. ಬರೀ ಋಷಿ ಮುನಿಗಳಿಗೆ ಸೀಮಿತವಾಗಿದ್ದ ಯೋಗವನ್ನು ಸಾಮಾನ್ಯ ಜನರಿಗೂ ಉಪಯೊಗವಾಗುವ ರೀತಿಯಲ್ಲಿ ಮಾರ್ಪಾಡು ಮಾಡಿ ಯೋಗಕ್ಕೆ ಹೊಸ ಆಯಾಮವನ್ನು ನೀಡಿದ ಕೀರ್ತಿ ಪತಂಜಲಿ ಮಹರ್ಷಿಗಳಿಗೆ ಸಲ್ಲುತ್ತದೆ. ಆದ್ದರಿಂದ ಪತಂಜಲಿ ಮಹರ್ಷಿಗಳನ್ನು ಯೋಗ ಪಿತಾಮಹಾ ಎಂದು ಕರೆಯುತ್ತಾರೆ.
International day of yoga 21.06.2023 ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ https://www.newsnext.co/?p=12931
https://chat.whatsapp.com/CgEr6sCOoOzInoK9DNcvD7
ಯೋಗ ಎಂದರೆ ಶರೀರ ಮತ್ತು ಮನಸ್ಸಿನ ಸಮತೋಲನ ಸ್ಥಿತಿ, ಯೋಗ ಅಂದರೆ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ, ಯೋಗ ಅಂದರೆ ನಾವು ಮಾಡುವ ಕೆಲಸದಲ್ಲಿ ಕೌಶಲ್ಯತೆಯನ್ನು ಹೊಂದುವುದು, ಯೋಗ ಎಂದರೆ ಮನಸ್ಸಿನ ವಿಕ್ಷೇಪಗಳನ್ನು ಹತೋಟಿಯಲ್ಲಿ ಇಡುವುದು, ಯೋಗ ಎಂದರೆ ಆತ್ಮ ಮತ್ತು ಪರಮಾತ್ಮನ ಸಂಯೋಗ. ಇಂತಹ ಪರಿಣಾಮಕಾರಿ ಯೋಗ ವಿಜ್ಞಾನವನ್ನು ಮನುಕುಲದ ಸರ್ವತೋಮುಖ ಅಭಿವೃಧ್ಧಿಗೆ ಹಾಗೂ ವಿಶ್ವಶಾಂತಿಗೆ ಬಳಸಬೇಕು, ಯೋಗವನ್ನು ಪ್ರಪಂಚದಾದ್ಯಂತ ಜನರಿಗೆ ತಲುಪಿಸ ಬೇಕೆಂಬ ಉದ್ದೇಶದಿಂದ ಭಾರತ ಸರ್ಕಾರ 2014 ರ ಸೆಪ್ಟೆಂಬರ್‍ನಲ್ಲಿ ವಿಶ್ವಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುವ ಪ್ರಸ್ತಾವನೆಯನ್ನು ಮಂಡಿಸಿದರು.
ಈ ಪ್ರಸ್ತಾವನೆಗೆ 2014 ರ ಡಿಸೆಂಬರ್‍ನಲ್ಲಿ ಪ್ರಪಂಚದ ವಿವಿಧ 177 ರಾಷ್ಟ್ರಗಳು ಅನುಮೋದನೆಯನ್ನು ನೀಡಿದವು. ನಂತರ ಒಂದು ವಿಶೇಷ ದಿನದಂದು ಯೋಗ ದಿನಾಚರಣೆಯನ್ನು ಆಚರಿಸಬೇಕೆಂಬ ನಿಟ್ಟಿನಲ್ಲಿ ಅಂದಿನ ಕೇಂದ್ರ ಸರ್ಕಾರವು ವರ್ಷದಲ್ಲಿ ಅತೀ ಹೆಚ್ಚಿನ ಅವಧಿಯ ಹಗಲನ್ನು ಹೊಂದಿರುವ ದಿನವಾದ ಜೂನ್ 21, 2015 ರಂದು Yoga for Harmony & Peace ವಿಶ್ವ ಶಾಂತಿಗಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಪ್ರಥಮ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನಿಂದ ಪ್ರತೀ ವರ್ಷ ಸಹ ಒಂದೊಂದು ಘೋಷವಾಕ್ಯದೊಂದಿಗೆ ಜೂನ್-21 ರಂದು ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಂದಿನಿಂದ ಪ್ರತೀವರ್ಷವೂ ಜೂನ್-21ರಂದು ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವರ್ಷ YOGA FOR VASUDAIVA KUTUMBAKAM ಹಾಗೂ HAR DIN HAR ANGAN YOGA -ಎಂಬ ಘೋಷ ವಾಕ್ಯದೊಂದಿಗೆ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಯೊಗವನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯಾಗುತ್ತದೆ. ಪ್ರತಿಯೊಬ್ಬರೂ ಸಹ ಶಾರೀರಿಕ ಹಾಗೂ ಮಾನಸಿಕವಾಗಿ ಸದೃಡರಾಗಿದ್ದರೆ ಆರೋಗ್ಯವಂತ ಕುಟುಂಬ ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ YOGA FOR VASUDAIVA KUTUMBAKAM ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಯೋಗದಿನಾಚರಣೆಯನ್ನು ಆಚರಿಸಲಾಗುತ್ತಿದೆ.
https://www.facebook.com/editornewsnext?mibextid=ZbWKwL
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳು ಬಹಳಷ್ಟು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಈ ಒತ್ತಡದಿಂದ ಬಹಳಷ್ಟು ಮಕ್ಕಳು ಹೊರಬರಲು ಸಾಧ್ಯವಾಗದೇ ತಮ್ಮ ಅಮೂಲ್ಯವಾದ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಅತಿಯಾದ ಒತ್ತಡದಿಂದ ಈಗ ನಮ್ಮ ಮಕ್ಕಳಲ್ಲಿ ಹಲವಷ್ಟು ಮನೋವ್ಯಾಕುಲಗಳು ಕಾಣಿಸಿಕೊಳ್ಳುತ್ತಿದೆ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ನಮ್ಮ ಮಕ್ಕಳ ಒತ್ತಡ ನಿವಾರಣೆಗಾಗಿ ಹಾಗೂ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ಆಯುಷ್ ಇಲಾಖೆ ಈಗ HAR GHAR HAR ANGAN YOGA ಎಂಬ ಘೋಷವಾಕ್ಯದೊಂದಿಗೆ ಅಂಗನವಾಡಿ ಮಕ್ಕಳಿಗೆ ಹಾಗೂ ಶಾಲಾ ಮಕ್ಕಳಿಗೆ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಕ್ಕಳಲ್ಲಿ 8 ವರ್ಷದವರೆಗೆ ಮೂಳೆಗಳು ಮೆದುವಾಗಿರುತ್ತದೆ ಹಾಗೂ ಬೆಳವಣಿಗೆ ಹಂತದಲ್ಲಿರುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಕ್ಲಿಷ್ಠಕರವಾದ ಆಸನಗಳನ್ನು ಅಭ್ಯಾಸ ಮಾಡಬಾರದು. ಆದರೆ ಸುಲಭವಾದ ಸರಳ ಆಸನಗಳನ್ನು ಪ್ರಾಣಿಗಳ ವಿವಿಧ ಭಂಗಿಗಳನ್ನು ಹೋಲುವ ಆಸನಗಳನ್ನು ಹಾಗೂ ಪ್ರಾಣಾಯಾಮಗಳನ್ನು ನಾವು ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಮಾಡಿಸುವುದರಿಂದ ಅದರಲ್ಲಿ ಸಾಕಷ್ಠು ಬದಲಾವಣೆಗಳನ್ನು ನಿರೀಕ್ಷಿಸಬಹುದು. ಇಂದು ಮಕ್ಕಳಲ್ಲಿ ಕಾಣುತ್ತಿರುವ ನೈತಿಕ ಮೌಲ್ಯಗಳ ಕೊರತೆ ಹಾಗೂ ಬೌದ್ಧಿಕತೆಯ ಕೊರತೆಯನ್ನು ಸಹ ನಿಯಮಿತ ಯೊಗ, ಪ್ರಾಣಾಯಾಮ ಅಭ್ಯಾಸದಿಂದ ನೀಗಿಸಬಹುದಾಗಿದೆ.
ಅತಿಯಾದ ಕಾರ್ಯದೊತ್ತಡ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಈಗ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಅತ್ಯಂತ ಒತ್ತಡದಲ್ಲಿ ಇರುತ್ತಾರೆ. ಇದರಿಂದ ಸಿಬ್ಬಂದಿಗಳ ದೈಹಿಕ ಮತ್ತುಮಾನಸಿಕ ಆರೋಗ್ಯ ಕ್ಷೀಣಿಸಿದೆ ಹಾಗೂ ಇದರಿಂದ ಸರ್ಕಾರಿ ಕಛೇರಿ ಕೆಲಸದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಆಯುಷ್ ಇಲಾಖೆಯ ಮುಖಾಂತರ ಕೆಲಸದ ಸಮಯದ ಮಧ್ಯ ದೈಹಿಕ ಮತ್ತು ಮಾನಸಿಕ ಶ್ರಮ ಹಾಗೂ ಒತ್ತಡವನ್ನು ದೂರಪಡಿಸಲು Y-Break (Yoga Break) ಎನ್ನುವ ವಿಧಾನವನ್ನು ಪರಿಚಯಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಯುಷ್ ಇಲಾಖೆಯು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ವಿವಿಧ ಸರ್ಕಾರಿ ಇಲಾಖೆಯ ಸಿಬ್ಬಂದಿಗಳಿಗೆ Y-Break (Yoga Break) ವಿಧಾನವನ್ನು ತಿಳಿಸಿ ಯೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಯೋಗವು ವ್ಯಾಪಾರೀಕರಣವಾಗುತ್ತಿರುವುದು ಈಗಿನ ಒಂದು ದುರಂತ. ಇಂದು ಹಣ ಮಾಡುವ ಉದ್ದೇಶಕ್ಕಾಗಿಯೇ ಹಲವರು ಯೋಗ ತರಬೇತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಯೋಗವನ್ನು ಮಾಡುವಷ್ಟೇ ಪ್ರಾಮುಖ್ಯತೆ ಯೋಗ ಮಾಡುವಾಗ ಅನುಸರಿಸಬೇಕಾದ ಉಸಿರಾಟದ ಕ್ರಿಯೆಯ ಮೇಲೂ ಇರುತ್ತದೆ. ಜೊತೆಗೆ ಕ್ಲಿಷ್ಠಕರ ಆಸನವನ್ನು ಪ್ರತಿ ನಿತ್ಯ ನಿಯಮಿತವಾಗಿ ಮಾಡಿದಾಗ ಮಾತ್ರ ಅಂತಿಮ ಹಂತ ತಲುಪಲು ಸಾಧ್ಯ ಆದ್ದರಿಂದ ಯೋಗವನ್ನು ನುರಿತ ತಜ್ಞರಿಂದ ಅಭ್ಯಾಸ ಮಾಡುವುದು ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ.
ಇಂದಿನ ಯುವ ಪೀಳಿಗೆ ತಂಬಾಕು, ಮದ್ಯ, ಡ್ರಗ್ಸ್‍ನಂತಹ ದುಷ್ಚಟಗಳ ದಾಸರಾಗುತ್ತಿರುವುದು ಖೇದಕರ. ಈ ದುಷ್ಚಟಗಳಿಂದ ಮುಕ್ತಿ ಹೊಂದಲು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಯೋಗ, ಪ್ರಾಣಾಯಾಮ ಅಭ್ಯಾಸ ಅತೀ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಮನೆಯಲ್ಲಿ ಪತಿ, ಪತ್ನಿಯರಲ್ಲಿ ಹೊಂದಾಣಿಕೆಯ ಕೊರತೆಯಿಂದಾಗಿ ಇಂದಿನ ದಿನದಲ್ಲಿ ವಿಛ್ಛೇದನ ಪ್ರಕರಣಗಳು ಹೆಚ್ಚಾಗಿವೆ. ಯೋಗ ನಿರಂತರ ಅಭ್ಯಾಸದಿಂದ ಕುಟುಂಬಿಕ ಸಾಮರಸ್ಯ ಕಂಡುಕೊಳ್ಳಲು ಸಹಕಾರಿಯಾಗುತ್ತದೆ.
ಇಂದು ಹಿರಿಯ ನಾಗರೀಕರಲ್ಲಿ ವಯಸ್ಸಿನ ಕಾರಣದಿಂದ, ಕುಟುಂಬ ವರ್ಗದವರ ನಿರ್ಲಕ್ಷ್ಯದಿಂದ, ಮಕ್ಕಳ ಕಡೆಗಣನೆಯಿಂದ ಹಾಗೂ ಇನ್ನಿತರೆ ಕಾರಣಗಳಿಂದ ಮನೋವ್ಯಾಕುಲತೆಗಳು ವೃದ್ಧಿಸಿದೆ. ವೃದ್ಧಾಪ್ಯದಲ್ಲಿ ಯೋಗ ಮತ್ತು ಪ್ರಾಣಾಯಾಮವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಸದೃಡ ಮಾನಸಿಕ ಆರೋಗ್ಯವನ್ನು ಸಂಪಾದಿಸಿ ಮನೋವ್ಯಾಕುಲತೆಯಿಂದ ದೂರವಾಗಬಹುದು.
ಇಷ್ಟೆಲ್ಲಾ ಪ್ರಯೋಜನವನ್ನು ಹೊಂದಿರುವ ಯೋಗವನ್ನು ನಾವೆಲ್ಲಾ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಯೋಗ ದಿನಾಚರಣೆ ಬರೀ ಜೂನ್ 21ಕ್ಕೆ ಸೀಮಿತವಾಗಿರದೇ ಪ್ರತಿದಿನ ಪ್ರತಿ ಮನೆಯ ಅಂಗಳದಲ್ಲಿ ಯೋಗವನ್ನು ಆಚರಿಸಿ ಉತ್ತಮ ಕುಟುಂಬ ಉತ್ತಮ ಸಮಾಜವನ್ನು ನಿರ್ಮಾಣ ಮಾಡೋಣ.
ಡಾ|| ರವಿಶಂಕರ್ ಉಡುಪ , ಹಿರಿಯ ವೈದ್ಯಾಧಿಕಾರಿಗಳು , ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ , ಸಾಲೂರು, ತೀರ್ಥಹಳ್ಳಿ ತಾಲ್ಲೂಕು
ಶಿವಮೊಗ್ಗ- 577414 , 9448871576