ಶಿವಮೊಗ್ಗ, ಡಿಸೆಂಬರ್ 26 : ಜಿಲ್ಲೆಯಲ್ಲಿ ಅಂಗವಿಕಲರ ಪ್ರಮಾಣ ಪತ್ರ ವಿತರಣೆಯನ್ನು ತ್ವರಿತಗೊಳಿಸಿ ನಿಗದಿತ ಅವಧಿಯ ಒಳಗಾಗಿ ಅರ್ಹರಿಗೆ ಪ್ರಮಾಣ ಪತ್ರ ತಲುಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ವಿಕಲಚೇತನರ ಕುಂದುಕೊರತೆಗಳ ನಿವಾರಣಾ ಸಭೆಯಲ್ಲಿ ಮಾತನಾಡಿದರು.
ಅಂಗವಿಕಲರು ಯುಡಿಡಿಐ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಜಿಲ್ಲೆಯಲ್ಲಿ 11ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದು, 964ಕಾರ್ಡ್ಗಳನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಸಹ ಕಾರ್ಡ್ ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಕಾರ್ಡ್ ವಿತರಣೆಯನ್ನು ತ್ವರಿತಗೊಳಿಸಬೇಕು. ಪರಿಶೀಲನೆಗೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ನಿಗದಿತ ಸಮಯದ ಒಳಗಾಗಿ ವಿಲೇವಾರಿ ಮಾಡಬೇಕು. ಪ್ರತಿ ವಾರ ಈ ಕುರಿತಾಗಿ ಪ್ರಗತಿ ವರದಿಯನ್ನು ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಪ್ರಸ್ತುತ ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಮಾತ್ರ ಶ್ರವಣ ದೋಷ ಇರುವವರಿಗೆ ಆಡಿಯೊ ಮೆಟ್ರಿಕ್ ಇವಾಲ್ಯುವೇಶನ್ ಮಾಡಲು ತಜ್ಞರು ಲಭ್ಯರಿದ್ದು, ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಈ ಸೌಲಭ್ಯ ಕಲ್ಪಿಸಬೇಕು. ವಾರಕ್ಕೆ ಒಮ್ಮೆಯಾದರೂ ಈ ಸೌಲಭ್ಯ ತಾಲೂಕು ಆಸ್ಪತ್ರೆಗಳಲ್ಲಿ ಒದಗಿಸಲು ಕ್ರಮ ಕೈಗೊ¼್ಳಬೇಕು. ಇದೇ ರೀತಿ ಬೇರೆ ಬೇರೆ ರೀತಿಯ ಅಂಗವಿಕಲತೆ ಪರಿಶೀಲನೆಗೆ ತಜ್ಞರು ಕನಿಷ್ಟ ತಿಂಗಳಿಗೆ ಒಮ್ಮೆ ನಿಗದಿತ ದಿನಾಂಕದಂದು ಎಲ್ಲಾ ತಾಲೂಕು ಆಸ್ಪತ್ರೆಯಲ್ಲಿ ಲಭ್ಯವಿರಬೇಕು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳು ಅಂಗವಿಕಲರಿಗಾಗಿ ಲಭ್ಯವಿರುವ ಶೇ.5ರ ಅನುದಾನವನ್ನು ಕೇವಲ ತ್ರಿಚಕ್ರ ವಾಹನ ಒದಗಿಸಲು ಮಾತ್ರ ಬಳಸಿಕೊಳ್ಳದೇ, ಎಲ್ಲಾ ರೀತಿಯ ಅಂಗವಿಕಲರಿಗೂ ಅನುಕೂಲವಾಗುವಂತಹ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ಶೇ.5ರ ಅನುದಾನವನ್ನು ಯಾವ ರೀತಿಯಲ್ಲಿ ಬಳಸಿಕೊಂಡಿವೆ ಎಂಬ ಬಗ್ಗೆ ಮಾಹಿತಿಯನ್ನು ಪಡೆಯಬೇಕು. ವಿವಿಧ ವಸತಿ ಯೋಜನೆಯಡಿ ಅಂಗವಿಕಲರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಕುರಿತಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರ ಅನುಕೂಲಕ್ಕಾಗಿ ರ್ಯಾಂಪ್, ಗಾಲಿ ಕುರ್ಚಿ, ಅಂಗವಿಕಲ ಸ್ನೇಹಿ ಶೌಚಾಲಯ ಸೇರಿದಂತೆ ಯಾವ್ಯಾವ ಸೌಲಭ್ಯಗಳಿಗೆ ಎಂಬ ಬಗ್ಗೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಅವರು ಸೂಚನೆ ನೀಡಿದರು.
